ಸಂತ ಅಲೋಶಿಯಸ್ ವಿದ್ಯಾಸಂಸ್ಥೆಯಿಂದ ಐದು ವಿಶಿಷ್ಟ ಸಾಧಕರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು, ಮಾ.12: ನಗರದ ಸಂತ ಅಲೋಶಿಯಸ್ ವಿದ್ಯಾಸಂಸ್ಥೆ ಸಂತ ಅಲೋಶಿಯಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ (ಸಾಕಾ)ದ ಸಹಯೋಗದೊಂದಿಗೆ ಶನಿವಾರ (ಮಾ.8) ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಫಾದರ್ ಎಲ್. ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಐದು ವಿಶಿಷ್ಠ ಸಾಧಕರಿಗೆ ಶ್ರೇಷ್ಠ ಅಲೋಶಿಯನ್ ಹಳೆ ವಿದ್ಯಾರ್ಥಿ ಪ್ರಶಸ್ತಿ 2025 ನೀಡಿ ಗೌರವಿಸಿಸಲಾಯಿತು.
2025ರ ಸಾಲಿನ ಶ್ರೇಷ್ಠ್ಠ ಅಲೋಷಿಯನ್ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ಉದ್ಯಮಿ ಕನ್ಯಾಡಿ ಸದಾಶಿವ ಶೆಟ್ಟಿ, ವರ್ಷದ ಸಿಐಒ ಪ್ರಶಸ್ತಿ ಪುರಸ್ಕೃತೆ ಲೂಸಿ ಮರಿಯಪ್ಪ, ಖ್ಯಾತ ಸಂಗೀತ ನಿರ್ದೇಶಕ ಡಾ. ಗುರುಕಿರಣ್ ಶೆಟ್ಟಿ, ಅಂತರರ್‌ರಾಷ್ಟ್ರೀಯ ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಡಾ. ಆಸ್ಕರ್ ಜಿ. ಕಾನ್ಸೆಸಾವೊ ಮತ್ತು ಉದ್ಯಮಿ ಮತ್ತು ಉದಾರದಾನಿ ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾ ಅವರಿಗೆ ಪ್ರದಾನ ಮಾಡಲಾಯಿತು.
ಸಸ್ಮಾನಿಸಿ ಮಾತನಾಡಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್, ಸಮಾಜಕ್ಕೆ ನೀಡಿದ ಅನುಕರಣೀಯ ಕೊಡುಗೆಗಳಿಗಾಗಿ ಪ್ರಶಸ್ತಿ ಪುರಸ್ಕೃತರನ್ನು ಶ್ಲಾಘಿಸಿದರು.
2025 ರಲ್ಲಿ ಸಂಸ್ಥೆಯ ನೂತನ ಕಾನೂನು ಕಾಲೇಜಿನ ಪ್ರಸ್ತಾವಿತ ಪ್ರಾರಂಭವನ್ನು ಘೋಷಿಸುವ ಮೂಲಕ ಅವರು ವಿಶ್ವವಿದ್ಯಾಲಯದ ವಿಸ್ತರಣಾ ಯೋಜನೆಗಳನ್ನು ವಿವರಿಸಿದರು.
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮತ್ತು ಸಂಸ್ಥೆಯ ಶತಮಾನೋತ್ಸವ ಮೈದಾನದಲ್ಲಿ ಎರಡು ಹೊಸ ಕಟ್ಟಡಗಳ ನಿರ್ಮಾಣದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೊ ಅವರು ಗೌರವ ಪಡೆದವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಸಂಚಾಲಕ ಎನ್.ಜಿ. ಮೋಹನ್ ಸ್ವಾಗತಿಸಿದರು, ಸಾಕಾ ಅಧ್ಯಕ್ಷ ಅನಿಲ್ ಕುಮಾರ್ ವಂದಿಸಿದರು. ಅಧ್ಯಾಪಕಿ ರೆನಿತಾ ಅರಾನ್ಹಾ ಕಾರ್ಯಕ್ರಮ ನಿರೂಪಿಸಿದರು.