ಬೆಳ್ತಂಗಡಿ: ಆಲಿಕಲ್ಲು ಸಹಿತ ಭಾರೀ ಮಳೆ

ಬೆಳ್ತಂಗಡಿ: ದಿನದಿಂದ ದಿನಕ್ಕೆ ಏರುತ್ತಿದ್ದ ತಾಪಮಾನದಿಂದ ಕಂಗೆಟ್ಟಿದ್ದ ಬೆಳ್ತಂಗಡಿ ತಾಲೂಕಿನ ಜನತೆಗೆ ಬುಧವಾರ ಸಂಜೆ ಸುರಿದ ದಿಢೀರ್ ಮಳೆ ಭಾರೀ ಸಮಾಧಾನ ತಂದಿದೆ. ವಾತಾವರಣ ತಂಪಾಗಿದೆ. ಬೀಸಿದ ಗಾಳಿಗೆ ಸುಮಾರು 30 ಕ್ಕೂ ಹೆಚ್ಚು ವಿದ್ಯುತ್ ಕಂಬಳು ಮುರಿದು ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗುತ್ತಿದೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದಿದೆ.
ಸಂಜೆ ಸುಮಾರು 5.30 ಗಂಟೆಯಿಂದ 6-30 ರವರೆಗೆ ಮಳೆ ಗುಡುಗು-ಸಿಡಿಲು, ಗಾಳಿ ಸಹಿತ ಸುರಿಯತೊಡಗಿತ್ತು. ತಾಲೂಕಿನ ಶಿಶಿಲ, ಅರಸಿನಮಕ್ಕಿ, ಧರ್ಮಸ್ಥಳ, ಮುಂಡಾಜೆ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಬಳಂಜ, ಅಳದಂಗಡಿ, ಫಂಡಿಜೆ, ನಾರಾವಿ, ವೇಣೂರು ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ. ಉಜಿರೆ, ಮುಂಡಾಜೆ, ಕಕ್ಕಿಂಜೆ, ನಡ, ಧರ್ಮಸ್ಥಳ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ.
ಮಳೆಯೊಂದಿಗೆ ಬೀಸಿದ ಗಾಳಿಗೆ ತಾಲೂಕಿನಾದ್ಯಂತ ಸುಮಾರು 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಕೊಯ್ಯೂರು, ಮಲೆಬೆಟ್ಟು, ಚಾರ್ಮಾಡಿ, ಅರಳಿ, ಸಕ್ಕರೆ ಬೆಟ್ಟು, ಕಾಶಿಬೆಟ್ಟು ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಧರಾಶಾಯಿಯಾಗಿರುವುದು ಕಂಡುಬಂದಿದೆ. ಗ್ರಾಮೀಣ ಭಾಗಗಳಲ್ಲಿನ ರಸ್ತೆಗಳ ಮೇಲೆ ಮರಗಳು ಬಿದ್ದಿವೆ. ಮಲೆಬೆಟ್ಟು, ಕೊಯ್ಯೂರು ಪ್ರದೇಶದಲ್ಲಿ ವಿಪರೀತ ಗಾಳಿ ಬೀಸಿದೆ. ಬೆಳ್ತಂಗಡಿ, ಧರ್ಮಸ್ಥಳ ಮುಂಡಾಜೆಯಲ್ಲಿ ರಾತ್ರಿ 8 ಗಂಟೆಯ ಬಳಿಕ ಮತ್ತೆ ಮಳೆ ಸುರಿಯತೊಡಗಿದೆ.
ಕಳೆದ ಹದಿನೈದು ದಿನಗಳಿಂದೀಚೆಗೆ ವಿಪರೀತ ಸೆಖೆಯ ವಾತಾವರಣ ಇತ್ತು. 41 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವಿತ್ತು. ಜನರು ಮಳೆಗೆ ಕಾತರಿಸುತ್ತಿದ್ದರು. ಬುಧವಾರ ಸುರಿದ ಮಳೆಯಿಂದಾಗಿ ತಾಲೂಕು ತಂಪಾಗಿದೆ.
ಭಾರೀ ಮಳೆ ಹಾಗೂ ಗಾಳಿಯಿಂದಾಗಿ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಹುತೇಕ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕತ್ತಲೆ ಆವರಿಸಿದೆ. ಹಲವೆಡೆ ರಾತ್ರಿಯೂ ಮಳೆ ಮುಂದುವರಿದಿದೆ.