ನಂದಿನಿ ಹಾಲು ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ಮಂಗಳೂರು, ಮಾ.13: ಪ್ರಸ್ತಾಪಿತ ನಂದಿನ ಹಾಲಿನ ಬೆಲೆ ಅಂದಾಜು 5 ರೂ.ದರ ಏರಿಕೆ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ರಾಜ್ಯ ಸರಕಾರ ಹಾಗು ಕರ್ನಾಟಕ ಹಾಲು ಮಹಾಮಂಡಳಗಳಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಜಿ.ಕೆ ಶೆಟ್ಟಿ, ಒಂದೊಮ್ಮೆ ದರ ಹೆಚ್ಚಳ ಮಾಡಿದರೆ ಹೋಟೆಲ್ ಉದ್ಯಮದ ಮೇಲೆ ಅದು ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಫಿ ಪುಡಿ ದರ ಆಕಾಶಕ್ಕೇರಿದೆ. ಈಗ ಹಾಲಿನ ಬೆಲೆ ಹೆಚ್ಚಳಗೊಂಡರೆ ಚಹಾ, ಕಾಫಿ ಯಂತಹ ನಾನಾ ಬಿಸಿ ಪಾನೀಯಗಳ ಬೆಲೆ ಏರಿಕೆ ಹೋಟೆಲ್ ಮಾಲಕರಿಗೆ ಅನಿವಾರ್ಯವಾಗಲಿದೆ. ಇದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿರುವ ಹಾಗು ಸರಕಾರ ಹಾಗು ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಮಟ್ಟದ ತೆರಿಗೆ ಮೂಲವಾಗಿರುವ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಕಂಟಕ ಪ್ರಾಯವಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಆಹಾರ ಸುರಕ್ಷತಾ ನೀತಿಗೆ ಅನುಗುಣವಾಗಿ ಎಲ್ಲ ಶುಚಿತ್ವ ಹಾಗು ಗುಣಮಟ್ಟದ ನೀತಿಗಳನ್ನು ಅನುಸರಿಸುತ್ತಾ ಗುಣಮಟ್ಟದ ಚಹಾ, ಕಾಫಿ ಮತ್ತಿತರ ಪಾನೀಯಗಳನ್ನು ಒದಗಿಸುತ್ತವೆ. ಒಂದೊಮ್ಮೆ ಹಾಲಿನ ದರ ಹೆಚ್ಚಳಗೊಂಡರೆ, ಇವುಗಳ ಬೆಲೆ ಏರಿಕೆ ಅನಿವಾರ್ಯ ವಾಗಲಿದೆ. ಆಗ ಗ್ರಾಹಕರು ಅಗ್ಗದ ದರದಲ್ಲಿ ದೊರೆಯುವ ಆದರೆ ಯಾವುದೇ ಸುರಕ್ಷತಾ ಮಾನ ದಂಡಗಳನ್ನು ಅನುಸರಿಸದೆ ಮಾರಾಟ ಮಾಡಲಾಗುವ ಚಹಾ, ಕಾಫಿ ಸೇವನೆ ಆರಂಭಿಸಬಹುದು. ಇದು ಸಾರ್ವಜನಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಸರಕಾರ ಸಾರ್ವಜನಿಕ ಆರೋಗ್ಯ ಮತ್ತು ಹೋಟೆಲ್ ಉದ್ಯಮದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಹಾಲಿನ ಬೆಲೆ ಏರಿಕೆ ಪ್ರಸ್ತಾಪವನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ.