ಮಂಗಳೂರು| ಮ್ಯಾನೇಜರ್‌ನಿಂದಲೇ ಬ್ಯಾಂಕ್‌ಗೆ ವಂಚನೆ ಆರೋಪ: ಪ್ರಕರಣ ದಾಖಲು

ಮಂಗಳೂರು, ಮಾ.13: ಮ್ಯಾನೇಜರ್‌ವೊಬ್ಬ ತಾನು ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್‌ಗೆ ವಂಚಿಸಿದ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಆಫ್ ಬರೋಡಾದ ಕೊಣಾಜೆ ಬ್ರಾಂಚ್‌ನಲ್ಲಿ ಆರೋಪಿ ಡೆರಿಕ್ ಅಜಿತ್ ಡಿಸೋಜ ಎಂಬಾತ 2022ರ ಸೆಪ್ಟಂಬರ್ 22ರಿಂದ 2024ರ ಫೆಬ್ರವರಿ 7ರವರೆಗೆ ಮ್ಯಾನೇಜರ್ ಆಗಿದ್ದು, ಈ ಸಂದರ್ಭ ಬ್ಯಾಂಕಿನ ಹಿರಿಯ ನಾಗರಿಕರು ಠೇವಣಿಯಲ್ಲಿರಿಸಿದ್ದ ಹಣವನ್ನು ಖಾತೆದಾರರಿಗೆ ತಿಳಿಯದಂತೆ 1,44,71,000 ರೂ.ವನ್ನು ಸಾಲ ರೂಪದಲ್ಲಿ ಇತರ ಆರೋಪಿತರ ಖಾತೆಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ.
ಬ್ಯಾಂಕಿನಲ್ಲಿ ನಿರಖು ಠೇವಣಿಯಲ್ಲಿಡುವಂತೆ ಖಾತೆದಾರರು ತಿಳಿಸಿದ್ದರೂ ಕೂಡ ಅವರ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಕಂಪ್ಯೂಟರ್ ಪ್ರಿಂಟೆಡ್ ನಿರಖು ಠೇವಣಿ ರಶೀದಿ ಇದ್ದರೂ ಕೂಡ ಆರೋಪಿಯು ಅದನ್ನು ಖಾತೆದಾರರಿಗೆ ನೀಡದೆ ತಾನೇ ಸೃಷ್ಟಿಸಿದ್ದ ಕೈ ಬರಹದಲ್ಲಿರುವ ನಕಲಿ ನಿರಖು ಠೇವಣಿ ರಶೀದಿಗಳನ್ನು ನೀಡಿ ಅವರ ಖಾತೆಗಳಲ್ಲಿದ್ದ 67,94,000 ರೂ.ವನ್ನು ಇತರ ಆರೋಪಿತರ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.