ಕುಂಪಲ-ಬಗಂಬಿಲ: ಬಸ್‌ಗಳ ಟ್ರಿಪ್ ಕಡಿತಕ್ಕೆ ಕಡಿವಾಣ ಹಾಕಲು ಮನವಿ

ಮಂಗಳೂರು, ಮಾ.21:ಕುಂಪಲ-ಬಗಂಬಿಲ ನಡುವೆ ಓಡಾಡುವ ಖಾಸಗಿ ಸರಕಾರಿ ಬಸ್‌ಗಳ ಟ್ರಿಪ್ ಕಡಿತ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಿ ಸಿಪಿಎಂ ಕುಂಪಲ ಶಾಖೆಯ ನಿಯೋಗವೊಂದು ಶುಕ್ರವಾರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಹಾಗೂ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಪ್ರದೇಶವು ಸಾವಿರಾರು ಜನವಸತಿ ಇರುವ ಊರಾಗಿದೆ. ಇಲ್ಲಿ ಬಹುತೇಕ ದುಡಿಯುವ ವರ್ಗದ ಜನರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ದೈನಂದಿನ ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ರೋಗಿ ಗಳು ಆಸ್ಪತ್ರೆಗಳಿಗೆ ತೆರಳಲು ಊರಿನ ಸ್ಥಳೀಯ ಬಸ್‌ಗಳನ್ನೇ ಆಶ್ರಯಿಸಿರುತ್ತಾರೆ. ಈ ಭಾಗದಲ್ಲಿ ಈವರೆಗೆ ಸಂಚರಿಸುತ್ತಿದ್ದ 44ಇ ನಂಬರಿನ ನಾಲ್ಕು ಖಾಸಗಿ ಬಸ್‌ಗಳು ಹಾಗೂ 1 ಸರಕಾರಿ ಬಸ್ ಕಳೆದ 4 ತಿಂಗಳುಗಳಿಂದ ಆರ್‌ಟಿಒ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿಯಿಂದಾಗಿ ಉಂಟಾಗಿರುವ ಸಮಸ್ಯೆಗಳನ್ನು ನೆಪವಾಗಿಟ್ಟು ಕೊಂಡು ತನ್ನ ಸಂಚಾರವನ್ನು ನಿಲ್ಲಿಸಲಾಗಿದ್ದ ಬಸ್ಸುಗಳು ನೀರಿನ ಪೈಪ್ ಹಾಕಿದ ನಂತರವೂ ಸಂಚರಿ ಸದ ಕಾರಣ ಈ ಭಾಗದ ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಸಿಪಿಎಂ ಆರೋಪಿಸಿದೆ.
ಖಾಸಗಿ ಬಸ್ಸುಗಳು ಬೆಳಗ್ಗೆ 10 ಗಂಟೆಯವರೆಗೆ ಕೆಲವು ಟ್ರಿಪ್‌ಗಳನ್ನು ನಡೆಸಿದ ಬಳಿಕ ಸಂಜೆ ಒಂದೆರಡು ಟ್ರಿಪ್‌ಗಳನ್ನು ನಡೆಸುತ್ತಾರೆ. ಮಧ್ಯದ ಉಳಿದ ಅವಧಿಯಲ್ಲಿ ಟ್ರಿಪ್‌ಗಳನ್ನು ಏಕಾಏಕಿ ಕಡಿತಗೊಳಿಸಿರು ತ್ತಾರೆ. ಸರಕಾರಿ ಬಸ್ ಕೂಡ ಇದಕ್ಕೆ ಹೊರತಾಗಿಲ್ಲ. ಈ ರೀತಿ ಬಸ್ಸುಗಳು ಬೇಕಾಬಿಟ್ಟಿ ಸಂಚರಿಸುವ ಮೂಲಕ ಸೃಷ್ಟಿಯಾಗಿರುವ ಸಮಸ್ಯೆಗಳಿಂದ ಊರ ಪ್ರಯಾಣಿಕರು ಬಹಳ ತೊಂದರೆ ಅನುಭವಿಸುವಂ ತಾಗಿದೆ. ಹಾಗಾಗಿ ಸ್ಥಳೀಯ ರೂಟಿನ ಬಸ್ಸುಗಳು ತಮಗೆ ಇಷ್ಟ ಬಂದಂತೆ ಟ್ರಿಪ್ ಕಡಿತ ಮಾಡುತ್ತಿರು ವುದು ಸಾರಿಗೆ ಪ್ರಾಧಿಕಾರದ ನಿಯಮದ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಸಿಪಿಎಂ ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಉಳ್ಳಾಲ ವಲಯ ಸಮಿತಿ ಮುಖಂಡರಾದ ಪ್ರಮೋದಿನಿ ಕಲ್ಲಾಪು, ಸುಂದರ ಕುಂಪಲ, ಕುಂಪಲ ಶಾಖಾ ಕಾರ್ಯದರ್ಶಿ ಪದ್ಮನಾಭ ಕುಂಪಲ, ಕಮ್ಯುನಿಸ್ಟ್ ಹಿರಿಯ ನಾಯಕ ಕೃಷ್ಣ ಬೆಳ್ಚಡ ನಿಯೋಗದಲ್ಲಿದ್ದರು.







