ದಲಿತ ಮಹಿಳೆಗೆ ಹಲ್ಲೆ ಪ್ರಕರಣ: ಮಂಗಳೂರು ಜೈಲಿನಲ್ಲಿ ಆರೋಪಿಗಳನ್ನು ಭೇಟಿಯಾದ ಶಾಸಕ ಯಶ್ಪಾಲ್ ಸುವರ್ಣ, ಹರೀಶ್ ಪೂಂಜಾ
"ಪೊಲೀಸರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ತಕ್ಕ ಉತ್ತರ ನೀಡಲಾಗುವುದು"

ಮಂಗಳೂರು: ಉಡುಪಿಯಲ್ಲಿ ಮೀನು ಕಳವುಗೈದ ಆರೋಪದಲ್ಲಿ ದಲಿತ ಮಹಿಳೆಯ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಜೈಲಿನಲ್ಲಿರುವ ಐವರು ಆರೋಪಿಗಳನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಂಗಳವಾರ ಭೇಟಿ ಮಾಡಿದರು.
ಪ್ರಕರಣ ಸಂಬಂಧ ಬಂಧಿತರಾಗಿರುವ ಆರೋಪಿಗಳ ಜತೆ ಶಾಸಕರು ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ ಕರಾವಳಿಯ ಎರಡು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಪಕ್ಷದ ಕಚೇರಿಯಾಗಿ ಬಳಸಲಾಗುತ್ತಿದೆ. ದುಡಿದು ತಿನ್ನುವವರಿಗೆ ಈ ರೀತಿ ಅನ್ಯಾಯ ಮಾಡಿದರೆ ಯಾರು ಕ್ಷಮಿಸುವುದಿಲ್ಲ. ಜೀವದ ಹಂಗು ತೊರೆದು ಪುರುಷರಿಗೆ ಸರಿ ಸಮಾನ ವಾಗಿ ಮಹಿಳೆಯರು ಕೂಡ ಮೀನುಗಾರಿಕೆ ಮಾಡುತ್ತಾರೆ. ಆದರೆ ಪೊಲೀಸರು ನಡೆದುಕೊಂಡ ರೀತಿ ಸರಿಯಲ್ಲ. ಪೊಲೀಸರು ತಮ್ಮ ವರ್ತನೆ ತಿದ್ದಿಕೊಳ್ಳದಿದ್ದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.
ಶಾಸಕನಾಗಿ, ಮೀನುಗಾರನಾಗಿ ಅವರ ಜೊತೆಗೆ ನಿಲ್ಲುತ್ತೇನೆ. ಕಾಂಗ್ರೆಸ್‌ನವರಿಗೆ ಉಡುಪಿ, ಮಂಗಳೂರಿ ನಲ್ಲಿ ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅಧಿಕಾರಿಗಳ ಮೂಲಕ ಸುಳ್ಳು ಕೇಸು ದಾಖಲಿಸುತ್ತಿ ದ್ದಾರೆ. ಕಾರ್ಯಕರ್ತರ ಶಕ್ತಿಯನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದರು.