ನರಿಂಗಾನ: ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ
ಕ್ಷಯ ಮುಕ್ತ ನರಿಂಗಾನ ಗ್ರಾಮ ಘೋಷಣೆ

ಕೊಣಾಜೆ : ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಮಂಗಳೂರು ಮತ್ತು ನರಿಂಗಾನ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ದಶಮಾನೋತ್ಸವದ ಪ್ರಯುಕ್ತ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನರಿಂಗಾನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನಸಭೆ ಸಭಾಧ್ಯಕ್ಷ ಯು. ಟಿ. ಖಾದರ್ ಮಾತನಾಡಿ ನರಿಂಗಾನ ಮಾದರಿ ಗ್ರಾಮ ಮಾಡುವತ್ತ ಪ್ರಯತ್ನ ಮುಂದುವರಿದಿದೆ. ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಪರಸ್ಪರ ಸೋದರತೆಯಲ್ಲಿ ಬದುಕಲು ಕಳಿಸಿ ಎಂದರು.
ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ ಅಧ್ಯಕ್ಷತೆ ವಹಿಸಿದ್ದರು.
ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಹಾಗೂ ನರಿಂಗಾನ ಬೋಳ ಸಂತ ಲಾರೆನ್ಸ್ ದೇವಾಲಯದ ಧರ್ಮ ಗುರು ಫಾ. ರೆ. ಫೆಡ್ರಿಕ್ ಕೊರೆಯ, ಮಂಗಳೂರು ವಿವಿಯ ನಿವೃತ್ತ ಅಧೀಕ್ಷಕ ಹರೀಶ್ ಕುಮಾರ್ ಕುತ್ತಡ್ಕ, ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಉಪಾ ಧ್ಯಕ್ಷ ನಿಯಾಝುರ್ರಹ್ಮಾನ್ ಪೆರ್ಲ, ಮಂಗಳೂರಿನ ಖತೀಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶ್ರಫ್ ಎಂ.ಸಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಡಿಸೋಜ ಹಾಗೂ ನರಿಂಗಾನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಡಿ ಗಟ್ಟಿ ಉಪಸ್ಥಿತರಿದ್ದರು.
ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎನ್. ಅಮೀನ್ ಪಕ್ಕಲಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ. ಆಶೀರುದ್ದಿನ್ ಸಾರ್ಥಬೈಲ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ನೀಡಿದ ವರದಿಯಂತೆ ನರಿಂಗಾನ ಗ್ರಾಮವನ್ನು ಕ್ಷಯ ಮುಕ್ತ ನರಿಂಗಾನ ಗ್ರಾಮ ಎಂದು ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ ಘೋಷಣೆ ಮಾಡಿದರು.
ಎನ್. ಅಮೀನ್ ಪಕ್ಕಲಡ್ಕ ಅವರು ರಚಿಸಿದ "ಆನೆ ಬಂತೊಂದಾನೆ" ಕಥಾ ಸಂಕಲನವನ್ನು ಯು. ಟಿ. ಖಾದರ್ ಬಿಡುಗಡೆಗೊಳಿಸಿದರು.







