ಮಂಗಳೂರು: ದಸಂಸದಿಂದ ಅಂಬೇಡ್ಕರ್ ವ್ರತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ

ಮಂಗಳೂರು: ಸಂವಿಧಾನಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು ಸೇರಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈಯ್ಯುವ ಮೂಲಕ ಸಂವಿಧಾನ ಶಿಲ್ಪಿಗೆ ವಿಶೇಷ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕ ಎಂ.ದೇವದಾಸ್, ಅಂಬೇಡ್ಕರ್ ತಮ್ಮ ಜೀವಿತ ಅವಧಿಯಲ್ಲಿ ಅದೆಷ್ಟೋ ಮಹಾನ್ ಸಾಧನೆಗಳನ್ನು ಮಾಡಿ ಜಗತ್ತಿಗೆ ತನ್ನ ಹಿರಿಮೆಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಚಿಂತನೆಯ ಹಾದಿಯಲ್ಲಿ ಇಂದಿನ ಸಮಾಜ ಸಾಗಬೇಕಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆಗೆ ಸ್ಪಷ್ಟವಾದ ಸಂದೇಶವನ್ನು ದಲಿತ ಸಂಘಟನೆ ರವಾನಿಸಿದೆ. ಈ ಹಿಂದೆ ನೀಡಿದ ಗಡುವಿನಂತೆ 15 ದಿನಗಳಲ್ಲಿ ಅಂಬೇಡ್ಕರ್ ವೃತ್ತ ಕಾಮಗಾರಿಯನ್ನು ಪ್ರಾರಂಭಿಸದಿದ್ದಲ್ಲಿ ನಗರ ಪಾಲಿಕೆ ಚಲೋ ಹಮ್ಮಿಕೊಳ್ಳಲಾಗುವುದು. ಜಿಲ್ಲಾಆಡಳಿತ ಮತ್ತು ನಗರ ಪಾಲಿಕೆ ಅಂಬೇಡ್ಕರ್ ವೃತ್ತ ನಿರ್ಮಾಣದಲ್ಲಿ ತನ್ನ ಬದ್ದತೆಯನ್ನು ತೋರಿಸಬೇಕೆಂದು ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಮನ್ವಯ ಸಮಿತಿಯ ಮುಖಂಡರಾದ ರಮೇಶ್ ಕೋಟ್ಯಾನ್, ಚಂದ್ರಕುಮಾರ್, ರಮೇಶ್ ಕಾವೂರು, ಪ್ರೇಮ್ ಬಲ್ಲಾಳ್ ಬಾಗ್, ಕಮಲಾಕ್ಷ ಬಜಾಜ್, ಜಗದೀಶ್ ಪಾಂಡೇಶ್ವರ, ರಾಮದಾಸ್ ಮೇರಮಜಲು, ಜಗದೀಶ್ ಸೂಟರ್ ಪೇಟೆ, ಗಣೇಶ್ ಸೂಟರ್ ಪೇಟೆ, ಬಾಬು ಛಲವಾದಿ, ಜ್ಯೋತಿ, ರಾಜಯ್ಯ ಮೊದಲಾವರು ಉಪಸ್ಥಿತರಿದ್ದರು.