ಮಂಗಳೂರು: ಶಿಲುಬೆಯ ಆರಾಧನೆಯೊಂದಿಗೆ ಶುಭ ಶುಕ್ರವಾರ ಆಚರಣೆ

ಮಂಗಳೂರು: ಯೇಸು ಕ್ರಿಸ್ತರು ಶಿಲುಬೆಗೇರಿದ ಸ್ಮರಣಾರ್ಥ ಆಚರಿಸಲಾಗುವ ‘ಶುಭ ಶುಕ್ರವಾರ’ (ಗುಡ್ ಫ್ರೈಡೇ) ವನ್ನು ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ಶಿಲುಬೆಯ ಹಾದಿ, ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆಯೊಂದಿಗೆ ಆಚರಿಸಲಾಯಿತು.
ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈ ಡೇ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆ ನೆರವೇರಿತು.
ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ ಶುಭ ಶುಕ್ರವಾರದ ವಿಧಿವಿಧಾನಗಳನ್ನು ಕಾಸರಗೋಡಿನ ಬೋವಿಕ್ಕಾನ ರಿಸೆನ್ ಸೇವಿಯರ್ ಚರ್ಚ್‌ನಲ್ಲಿ ನಡೆಸಿಕೊಟ್ಟರು. ಚರ್ಚ್‌ನ ಧರ್ಮಗುರು ರೆ.ಫಾ. ಕ್ಲೌಡಿ ಸ್ಟಾನಿ ವಾಸ್ ಉಪಸ್ಥಿತರಿದ್ದರು.
ಪ್ರಾರ್ಥನಾ ವಿಧಿ ವಿಧಾನಗಳ ಬಳಿಕ ಸಂದೇಶ ನೀಡಿದ ಬಿಷಪ್, ಶಿಲುಬೆಯ ಪ್ರಾಮುಖ್ಯತೆ ಹಾಗೂ ಯೇಸುವಿನ ಪ್ರೀತಿಯ ಹಾದಿಯ ಬಗ್ಗೆ ವಿವರ ನೀಡಿದರು.
‘ಶಿಲುಬೆಯು ಸೋಲಿನ ಸಂಕೇತವಲ್ಲ. ಬದಲಿಗೆ, ಭರವಸೆ ಮತ್ತು ವಿಜಯದ ಪ್ರತೀಕ. ಇದು ಮಾನವೀಯ ತೆಯ ಮೇಲಿನ ದೇವರ ಬೇಷರತ್ ಪ್ರೀತಿಯ ಸಂಕೇತ’ ಎಂದು ಹೇಳಿದ ಬಿಷಪ್ ರೆ.ಡಾ. ಪೀಟರ್ ಪೌವ್ಲ್ ಸಲ್ಡಾನ, ಕ್ಷಮೆ, ಸಹಾನೂಭೂತಿ ಮತ್ತು ಸ್ವ ಕೊಡುಗೆಯ ಜೀವನ ನಡೆಸುವಂತೆ ಕರೆ ನೀಡಿದರು.
ಕ್ರಿಸ್ತರು ಶಿಲುಬೆ ಮರಣದ ಮೂಲಕ ಸಮರ್ಪಣೆಯೊಂದಿಗೆ ಜನರ ಕಷ್ಟದೊಂದಿಗೆ ನಾನಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಮನಪರಿವರ್ತನೆ ಹಾಗೂ ಸಾಮಾಜಿಕ ಬದಲಾವಣೆಗೆ ಕ್ರಿಸ್ತರ ಶಿಲುಬೆ ಮರಣ ನಮಗೆ ಕರೆ ನೀಡುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆ ವಿವಿಧ ಚರ್ಚ್‌ಗಳಲ್ಲಿ ಬೆಳಗ್ಗಿನಿಂದ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಿಲುಬೆಯ ಹಾದಿ: ಕೆಲವು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತ ಪಡಿಸಲಾಯಿತು. ಶಿಲುಬೆಯ ಹಾದಿಯ ೧೪ ಪ್ರಮುಖ ಘಟ್ಟಗಳನ್ನು ನೆನಪಿಸಿ ಧ್ಯಾನಿಸಿ ಪ್ರಾರ್ಥಿಸಿದರು.







