ಮಂಗಳೂರು: ಬೇಸಿಗೆ ಶಿಬಿರದ ಮಕ್ಕಳಿಂದ ಮುಖ್ಯಮಂತ್ರಿಗೆ ಪೋಸ್ಟ್‌ಕಾರ್ಡ್

ಮಂಗಳೂರು, ಎ. 18: ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಭಿನ್ನ ರೀತಿಯ ತರಬೇತಿಗಳನ್ನು ನೀಡುವ ಜತೆಗೆ ಸಾಮಾಜಿಕ ಕಳಕಳಿಯ ವಿಚಾರಧಾರೆಗಳನ್ನು ತಿಳಿಸಲು ಸಾಧ್ಯ ಎಂಬುದಕ್ಕೆ ರಂಗಸ್ವರೂಪ (ರಿ) ಉದಾಹರಣೆಯಾಗಿದೆ.
ರಂಗ ಸ್ವರೂಪ ಕುಂಜತ್ತಬೈಲ್ ಸಂಸ್ಥೆಯಿಂದ ರೆಹಮಾನ್ ಖಾನ್ ಮತ್ತು ತಂಡದ ನೇತೃತ್ವದಲ್ಲಿ ಮರಕಡದ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಮಕ್ಕಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪೋಸ್ಟ್‌ಕಾರ್ಡ್ ಅಭಿಯಾನವೊಂದು ನಡೆದಿದೆ. ಪೋಸ್ಟ್ ಕಾರ್ಡ್ ಮೂಲಕ ಹಿರಿಯ ಜಾನಪದ ಕಲಾವಿದರು, ಪದ್ಮಶ್ರೀ ಪುರಸ್ಕೃತರಾದ ಇತ್ತೀಚೆಗೆ ಅಗಲಿದ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ ಗೌಡ ಸ್ಮರಣಾರ್ಥ ಅವರ ಸಾಧನೆ, ಚಿಂತನೆ ಹಾಗೂ ಪರಿಕಲ್ಪನೆಗಳು ಶಾಶ್ವತವಾಗಿ ಉಳಿಸಲು ಪ್ರತಿಷ್ಠಾನ ಸ್ಥಾಪಿಸಲು ಮನವಿ ಮಾಡಲಾಗಿದೆ.
ಶಿಬಿರದಲ್ಲಿ ನೂರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದು, ಮಕ್ಕಳು ತಮ್ಮ ಹೆಸರಿನ ಪೋಸ್ಟ್ ಕಾರ್ಡ್ ಮೂಲಕ ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದರ ಹೆಸರನ್ನು ಶಾಶ್ವತವಾಗಿಸುವ ನಿಟ್ಟಿನಲ್ಲಿ ಪ್ರತಿಷ್ಠಾನ ಸ್ಥಾಪಿಸಲು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಖ್ಯಾತ ಚಿತ್ರ ಕಲಾವಿದ, ಚಾರಣಿಗ, ಪರಿಸರವಾದಿ ದಿನೇಶ್ ಹೊಳ್ಳ ಅವರ ಮುಂದಾಳತ್ವದಲ್ಲಿ ಈ ಪೋಸ್ಟ್ ಕಾರ್ಡ್ ಅಭಿಯಾನ ನಡೆದಿದೆ.







