ಉದ್ಯಮಿಯ ಹಿತಕ್ಕಾಗಿ ಪುತ್ತೂರು ಯುಜಿಡಿ ಯೋಜನೆ ಬಲಿಗೊಡಲು ಸಂಚು: ಮಹಮ್ಮದ್ ಆಲಿ ಆರೋಪ

ಪುತ್ತೂರು: ಓರ್ವ ರಿಯಲ್ ಎಸ್ಟೇಟ್ ಉದ್ಯಮಿಯ ಹಿತಕ್ಕಾಗಿ ಪುತ್ತೂರು ನಗರದ ಒಳಚರಂಡಿ ಯೋಜನೆ (ಯುಜಿಡಿ)ಯನ್ನು ಬಲಿಕೊಡಲಾಗುತ್ತಿದ್ದು, ಈ ಉದ್ಯಮಿಯ ಹಿತಕ್ಕಾಗಿ ಪುತ್ತೂರಿನ ದೊಡ್ಡ ಯೋಜನೆ ಒಂದನ್ನು ಬದಿಗೆ ಸರಿಸಿ ಪುತ್ತೂರು ನಗರವನ್ನು ಬಲಿಪಶು ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಈ ಸಂಚಿನ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ನ ಕೆಲವು ದುಷ್ಟಕೂಟಗಳೂ ಸೇರಿಕೊಂಡಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರು ನಗರದ ಬಹುದೊಡ್ಡ ಸಮಸ್ಯೆಯಾಗಿರುವ ಅಸಮರ್ಪಕ ತ್ಯಾಜ್ಯ ನೀರಿನ ನಿರ್ವಹಣೆಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಳ ಚರಂಡಿ ಕೆಯುಡಬ್ಲುಎಸ್ ಇಲಾಖೆಯ ಮೂಲಕ ಸರ್ಕಾರವು ಸರ್ವೆ ನಡೆಸಿ ಒಳಚರಂಡಿ ಘಟಕವನ್ನು ಸ್ಥಾಪಿಸಲು ಚಿಕ್ಕಮುನ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ನಗರಸಭೆ ಈಗಾಗಲೇ 5.50 ಎಕ್ರೆ ಜಾಗವನ್ನು ಮೀಸಲಿಟ್ಟಿದೆ. ಆದರೆ ಅಂದಿನ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ನಿರ್ಲಕ್ಷ್ಯದ ಕಾರಣದಿಂದಾಗಿ ಮಂಜೂರುಗೊಂಡಿರುವ ಒಳ ಚರಂಡಿ ಯೋಜನೆಯು ಕೈ ಬಿಟ್ಟು ಹೋಗುವಂತಾಯಿತು ಎಂದು ಅವರು ತಿಳಿಸಿದ್ದಾರೆ.