ಸುರತ್ಕಲ್: ಗಣೇಶಪುರ ಶ್ರೀಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

ಸುರತ್ಕಲ್: ಶ್ರೀ ಕ್ಷೇತ್ರ ಗಣೇಶಪುರ ಶ್ರೀಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ, ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ, ವಿರಾಟ್ ಭಜನೋತ್ಸವ ಹಾಗೂ ಶ್ರೀ ಜಾರಂದಾಯ ದೈವದ ನೇಮೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಒಡಿಯೂರಿನ ಶ್ರೀ ಗುರುದೇವಾನಂದ ದತ್ತ ಶ್ರೀ ಸ್ವಾಮೀಜಿಯವರು ಕೃಷ್ಣಾಪುರದ ಯುವಕ ಮಂಡಲದ ವಠಾರದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇವತಾ ಕಾರ್ಯಗಳಿಗೆ ಭಕ್ತಾದಿಗಳು ನೀಡುವ ತನು ಮನದ ಸಹಕಾರ ಸ್ಮರಣೀಯ. ಗ್ರಾಮದ ಅಭ್ಯುದಯ ದೇವತಾ ಕಾರ್ಯದಿಂದಲೇ ಸಾಧ್ಯ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶಾಸಕ ಡಾ. ವೈ ಭರತ್ ಶೆಟ್ಟಿಯವರು, ಹಿಂದೂ ಸಮಾಜ ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯವಿದೆ. ದೇವಸ್ಥಾನಗಳ ಸಣ್ಣ ಕಾರ್ಯಕ್ರಮಗಳಲ್ಲಿಯೂ ಹೆಚ್ವಿನ ಪ್ರಮಾಣದ ಜನರು ಸೇರುತ್ತಿರುವುದು ಸಮಾಜ ಹಿಂದುತ್ವದ ಪರವಾಗಿರುವ ಸಂಕೇತ ಎಂದರು.
ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅವರು ಮಾತನಾಡಿ, ದೇವಸ್ಥಾನದ ಮುಂದಿನ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಸರ್ವಭಕ್ತರ ಸಹಕಾರವನ್ನು ಕೋರಿ ದೇವಸ್ಥಾನದ ಹಾಗೂ ಶ್ರೀ ಕ್ಷೇತ್ರ ಗಣೇಶ ಪುರ ಮಹಾ ಗಣಪತಿ ದೇವಸ್ಥಾನ ಹಾಗೂ ಕೃಷ್ಣಾಪುರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಮರಣೀಯ ಸೇವೆಯನ್ನು ನೆನಪಿಸಿದರು.
ವೇದಿಕೆಯಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಜೆ.ಡಿ. ವೀರಪ್ಪ, ಮಹಾಬಲ ಪೂಜಾರಿ ಕಡಂಬೋಡಿ, ಅನಿಲ್ ಶೆಟ್ಟಿ ತೇವು ಸೂರಿಂಜೆ, ತಿಲಕ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಶೆಟ್ಟಿ ಮಧ್ಯ, ಸುಕುಮಾರ ಭಂಡಾರಿ, ಬ್ರಹ್ಮಕಲೋತ್ಸವ ಸಮಿತಿಯ ಅಧ್ಯಕ್ಷ ಯಾದವ ಕೋಟ್ಯಾನ್, ಶ್ರೀಧರ ಹೊಳ್ಳ, ದುರ್ಗಾಪ್ರಸಾದ್ ಹೊಳ್ಳ, ಅಶೋಕ್ ಕೃಷ್ಣಾಪುರ, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಧಾಮ ಶೆಟ್ಟಿ, ಪ್ರವೀಣ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಪ್ರಶಾಂತ್ ಮುಡಾಯಿಕೊಡಿ ಧನ್ಯವಾದ ಸಮರ್ಪಿಸಿದರು. ಸುಧಾಕರ ಕಾಮತ್ ಕಾರ್ಯಕ್ರಮ ನಿರೂಪಿಸಿದರು.







