ವಿನೂತನ ಒಳಮೀಸಲಾತಿ ನೀತಿ ಪ್ರಕಟಿಸಿ: ಸರಕಾರಕ್ಕೆ ಲೋಲಾಕ್ಷ ಆಗ್ರಹ

ಮಂಗಳೂರು : ಬೀದಿ ಗುಡಿಸುವವರ ಮಕ್ಕಳು ಮತ್ತು ಜಿಲ್ಲಾಧಿಕಾರಿ ಮತ್ತು ಮಂತ್ರಿಗಳ ಮಕ್ಕಳು ಕೇವಲ ಅವರೆಲ್ಲರ ಜಾತಿ ಒಂದೇ ಎಂಬ ಕಾರಣಕ್ಕಾಗಿ, ಶಿಕ್ಷಣಕ್ಕೆ ಮತ್ತು ಸರಕಾರಿ ನೌಕರಿ ಪಡೆಯಲು ಒಂದೇ ಕೋಟಾದಡಿಯಲ್ಲಿ ಸ್ಪರ್ಧೆ ಎದುರಿಸಬೇಕು ಎಂಬ ಚಿಂತನೆ, ಒಂದೇ ಕೋಟಾದಲ್ಲಿ ನೌಕರಿಗಾಗಿ ಸ್ಪರ್ಧೆ ನಡೆಸಬೇಕು ಎಂಬ ಚಿಂತನೆ ಮತ್ತು ಅಂತಹ ನೀತಿ ಅತ್ಯಂತ ಅಮಾನವೀಯ ಎಂದು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಹೇಳಿದ್ದಾರೆ.
ನಗರದ ಹೊಟೇಲ್ ಶ್ರೀನಿವಾಸ್‌ನಲ್ಲಿ ರವಿವಾರ ಸಂಘಟಿಸಲಾಗಿದ್ದ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ವಿನೂತನ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜ ನಮಗೆ ನೆರವು ನೀಡಬೇಕು ಎಂದು ಮನವಿ ಮಾಡಿದ ಅವರು, ಈ ಬಗ್ಗೆ ಶೀಘ್ರದಲ್ಲಿ ಮಹಾಒಕ್ಕೂಟದ ನಿಯೋಗ ನಮ್ಮ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಹೇಳಿದರು.
ಆಯೋಗದಿಂದಲೇ ಸಂವಿಧಾನಕ್ಕೆ ಅಪಚಾರ’
ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತವಾಗಿರುವ ‘ಆದಿ ಆಂಧ್ರ’, ’ಆದಿ ದ್ರಾವಿಡ’ ಮತ್ತು ’ಆದಿ ಕರ್ನಾಟಕ’ ಎಂಬ ಹೆಸರಿನ ಜಾತಿಗಳನ್ನು ‘ಅವುಗಳು ಜಾತಿಗಳಲ್ಲ, ಜಾತಿಗಳ ಗುಂಪುಗಳು. ಆದ್ದರಿಂದ ಈ ಗುಂಪು ಗಳಿಗೆ ಸೇರಿದವರು ಸಮೀಕ್ಷೆಯಲ್ಲಿ ತಮ್ಮ ಉಪ ಜಾತಿಗಳನ್ನು ದಾಖಲಿಸಬೇಕು’ ಎಂದು ಹೇಳುತ್ತಾ ಸರಕಾರದ ಓರ್ವ ಸಚಿವರು ಪರಿಶಿಷ್ಟ ಸಮುದಾಯಗಳಲ್ಲಿ ಅನಗತ್ಯ ಗೊಂದಲಗಳನ್ನು ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಮಕ್ಕಳ ಹಕ್ಕುಗಳ ಕುರಿತ ತಜ್ಞರಾದ ರೆನ್ನಿ ಡಿ ಸೋಜ ಅವರು, ಸಮಾಜದಲ್ಲಿ ಇರುವ ಶ್ರೇಣೀಕೃತ ವ್ಯವಸ್ಥೆಯಂತೆಯೇ ಶಿಕ್ಷಣ ಪದ್ಧತಿಯಲ್ಲೂ ಶ್ರೇಣಿಕರಣ ಇದ್ದು, ಇದು ಪರಿಶಿಷ್ಟ ಜಾತಿಗಳಲ್ಲಿ ಆತಂಕಕಾರಿಯಾದ ಅಸಮಾನತೆಗೆ ಕಾರವಾಗುತ್ತಿದೆ ಎಂದು ಪಿಪಿಟಿ ಮೂಲಕ ಸಾಕಷ್ಟು ದತ್ತಾಂಶಗಳ ಮೂಲಕ ವಿವರಿಸಿ, ವಿಶ್ಲೇಷಣೆ ನಡೆಸಿದರು.
ಈ ಸಮಾಲೋಚನಾ ಕಾರ್ಯಕ್ರಮವನ್ನು ವಿಶ್ರಾಂತ ಪೌರ ಕಾರ್ಮಿಕೆ ಪೂವಮ್ಮ ಉದ್ಘಾಟಿಸಿದರು.
ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ ಎ ಎಂ ಹನೀಫ್, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಹಿರಿಯ ಪತ್ರಕರ್ತರಾದ ಎಸ್.ಜಯರಾಮ್ ಮತ್ತು ರಮೇಶ್ ಪೆರ್ಲ, ಮಾಜಿ ಕಾರ್ಪೂರೇಟರ್ ಪ್ರೇಮ್ ಬಲ್ಲಾಳ್‌ಭಾಗ್, ಡಿಎಸ್‌ಎಸ್ ಸಂಚಾಲಕ ಗಿರೀಶ್ ಉಳ್ಳಾಲ್, ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಉಪಾಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಸೀತಾರಾಮ್ ಕೊಂಚಾಡಿ, ಉಪ ಕಾರ್ಯದರ್ಶಿ ಪದ್ಮನಾಭ ಮೂಡಬಿದರೆ, ಪ್ರೊ. ಐಡಾ ಡಿ ಸೋಜ, ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಅನಿಲ್ ಕಂಕನಾಡಿ, ವಿವಿ ಯ ಶಿಕ್ಷಕ ಡಾ. ಅನಿಲ್ ಮತ್ತು ಜಿಲ್ಲೆಯ ವಿವಿಧ ಪರಿಶಿಷ್ಟ ಜಾತಿಗಳ ಸಂಘಟನೆಗಳ ನಾಯಕರು, ವಿವಿಧ ನೌಕರರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಸಮಾಲೋಚನೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.