ಸುರತ್ಕಲ್: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಒತ್ತಾಯ

ಸುರತ್ಕಲ್: ಇಲ್ಲಿನ ಮಧ್ಯ ಗಿರಿಜನ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಮನಪಾ 2ತಿಂಗಳ ಹಿಂದೆ ಬೋರ್ ವೆಲ್ ಕೊರೆಸಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಗಿರಿಜನರನ್ನು ನಿರ್ಲಕ್ಷಿಸು ತ್ತಿದೆ ಎಂದು ಗ್ರಾಮದ ಗಿರಿಜನರು ದೂರಿದ್ದಾರೆ.
ಕುಡಿಯಲು ನೀರು ನೀಡುವಂತೆ ಆಗ್ರಹಿಸಿ ಗಿರಿಜನರು ಮಂಗಳೂರು ಮನಪಾದ ಆಯುಕ್ತರ ಕಚೇರಿಗೆ ಭೇಟಿ ನೀಡಿ ಪ್ರತಿಭಟನೆ ಮಾಡಿದ್ದೆವು. ಲೋಕಾಯುಕ್ತಕ್ಕೆ ದೂರು ನೀಡಿದ್ದೆವು, ಆದರೂ ಈ ವರೆಗೂ ಯಾವುದೇ ಪ್ರಯೋಜನೆವಾಗಿಲ್ಲ. ಈಗಲೂ 3ದಿನಗಳಿಗೆ ಒಂದು ಬಾರಿ ನೀರು ಬರುತ್ತಿದೆ ಎಂದು ಮನಪಾಕ್ಕೆ ಹಲವು ಬಾರಿ ದೂರು ನೀಡಲಾಗಿತ್ತು. ಹಾಗಾಗಿ ಕಾಲನಿ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಬಾವಿ ತೋಡಲಾಗಿತ್ತು. ಆದರೆ, ಬಾವಿಯ ಪಕ್ಕದಲ್ಲೇ ಚರಂಡಿ ಇರುವುದರಿಂದ ಅದರ ನೀರು ಬಾವಿಗೆ ಸೇರಿ ಕುಡಿಯಲು ಅಯೋಗ್ಯವಾಗಿದೆ. ಈ ಹಿನ್ನೆಯಲ್ಲಿ ಕಾಲನಿ ನಿವಾಸಿಗಳು ವಾರ್ತಾಭಾರತಿಗೆ ದೂರು ನೀಡಿದ್ದರು. ಅದರಂತೆ ಪತ್ರಿಕೆ ಮಧ್ಯಕೊರಗ ಸಮದಾಯಕ್ಕೆ ನೀರಿನ ಸಮಸ್ಯೆಯ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.
ವರದಿಗೆ ಎಚ್ಚೆತ್ತುಕೊಂಡ ಸ್ಥಳೀಯ ಕಾರ್ಪೊರೇಟರ್ ಮತ್ತು ಮನಪಾ ವಲಯ1 ಸುರತ್ಕಲ್ ನ ಅಧಿಕಾರಿಗಳು ಗಿರಿಜನ ಕಾಲನಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹಾರ ಕಲ್ಪಿಸುವ ಭರವಸೆ ನೀಡಿ ದ್ದರು. ಅದರಂತೆ ಕಳೆದ ಎರಡು ತಿಳಗಳ ಹಿಂದೆ ಹೊಸದಾಗಿ ಬೋರ್ ವೆಲ್ ಕೊರೆಸಲಾಗಿತ್ತು. ಆದರೆ ಅದಕ್ಕೆ ಇನ್ನೂ ಮೋಟರ್ ಸಿಕ್ಕಿಸುವುದಾಗಲೀ, ವಿದ್ಯುತ್ ಸಂಪರ್ಕ ಕಲ್ಪುಸುವುದಾಗಲೀ ಮನಪಾ ಮಾಡಿಲ್ಲ ಎಂದು ಕಾಲನಿ ಜನರು ದೂರಿದ್ದಾರೆ.
ಮನಪಾ ಅಧಿಕಾರಿಗಳಿಗೆ ಗಿರಿಜನರು ಎಂದರೆ ಇಷ್ಟೊಂದು ತಾತ್ಸಾರ ಭಾವನೆ ಏಕೆ ಎಂದು ಪ್ರಶ್ನೆ ಮಾಡುತ್ತಿರುವ ಗಿರಿಜನ ಕಾಲನಿ ನಿವಾಸಿಗಳು, ಕೊರೆಸಲಾಗಿರುವ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಮೋಟಾರು ಹಾಕಿ ಕುಡಿಯುವ ನೀರು ನೀಡಲು ಮನಪಾ ಅಧಿಕಾರಿಗಳು ಮಂದಾಗಬೇಕು. ಇಲ್ಲವಾದಲ್ಲಿ ನಿವಾಸಿಗಳೆಲ್ಲಾ ಖಾಲಿಕೊಡಗಳೊಂದಿಗೆ ಮನಪಾ ಸುರತ್ಕಲ್ ವಲಯ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
"ಗಿರಿಜನ ಕಾಲನಿಯಲ್ಲಿ ಬೋರ್ ವೆಲ್ ಕೊರೆಸಿರುವ ಸಂಬಂಧ ಮಹಾನಗರ ಪಾಲಿಕೆಯಿಂದ ಎಲ್ಲಾ ಕೆಲಸಗಳನ್ನು ಪೂರ್ಣ ಮಾಡಿ ದಾಖಲೆ ಪತ್ರಗಳನ್ನು ಮೆಸ್ಕಾಂಗೆ ರವಾನಿಸಲಾಗಿದೆ. ಸದ್ಯ ಅದರ ಸ್ಥಿತಿಗತಿ ತಿಳಿದಿಲ್ಲ. ನಾಳೆಯೇ ಮೆಸ್ಕಾಂ ಅಧಿಖಾರಿಗಳನ್ನು ಸಂಪರ್ಕಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚನೆ ನೀಡಲಾಗುವುದು".
- ಕಾರ್ತಿಕ್ ಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನಪಾ ಸುರತ್ಕಲ್ ವಲಯ
"ಕುಡಿಯುವ ನೀರಿಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಮೂರುದಿನಕ್ದಿಕೊಂದು ಬಾರಿ ಒಂದು ಗಂಟೆ ನೀರು ಬಿಡುತ್ತಾರೆ. ಕಾಲನಿಯಲ್ಲಿ 32 ಮನೆಗಳಿಗಳಿದ್ದು, ಪ್ರತೀ ಮನೆಗೆ 8-9 ಕೊಡ ನೀರು ಸಿಗುತ್ತದೆ. ಸದ್ಯ ಖಾಸಗಿಯವರ ಬಾವಿಯಿಂದ ನೀರು ಸೇದಿ ತರಬೇಕಿದೆ. ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವರೆಗಾದರೂ ಪ್ರತೀದಿನ ಒಂದು ಗಂಟೆಯಾದರೂ ನೀರು ಬಿಟ್ಟರೆ ಉತ್ತಮ".
- ಜಯಾ, ಕಾಲನಿ ನಿವಾಸಿ







