ಸಾಲ ನೀಡುವುದಾಗಿ ನಂಬಿಸಿ ಮಹಿಳೆಯರಿಗೆ ಮೋಸ: ಪ್ರಕರಣ ದಾಖಲು

ಪಡುಬಿದ್ರಿ: ಸರಕಾರದಿಂದ ಸಾಲ ತೆಗೆಸಿಕೊಡುವುದಾಗಿ ನಂಬಿಸಿ ಮಹಿಳೆಯರಿಂದ ಒಟ್ಟು 4,32,000 ರೂ. ಪಡೆದು ಸಾಲವನ್ನು ನೀಡದೇ ನಂಬಿಸಿ ಮೋಸ ಮಾಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಡಾ ಎರ್ಮಾಳು ಗ್ರಾಮದ ನಿವಾಸಿ ಪಣಿಯೂರಿನಲ್ಲಿ ವಾಸವಿರುವ ಮುಮ್ತಾಝ್ ಅವರು ಲಕ್ಷ್ಮೀ, ಶಿವರಾಜ್ ಹಾಗು ಇನ್ನೋರ್ವನ ವಿರುದ್ಧ ದೂರು ನೀಡಿದ್ದಾರೆ.
ನಾವು ಸರಕಾರರಿಂದ 1 ಲಕ್ಷ ಬಡ್ಡಿ ರಹಿತ ಸಾಲ ತೆಗೆಸಿಕೊಡುತ್ತೇವೆ ಎಂದು ಹೇಳಿದ್ದರು. ಅವರ ಮಾತಿ ನಂತೆ ಈ ಬಗ್ಗೆ ಊರಿನವರಿಗೆ ತಿಳಿಸಿ, ಇತರ 35 ಜನರನ್ನು ಒಟ್ಟು ಸೇರಿಸಿದ್ದು, ಫೆ,11ರಂದು ಆರೋಪಿಗಳು ಮನೆಗೆ ಬಂದು ಮನೆಯಲ್ಲಿ ಸೇರಿದವರ ಜೊತೆಯಲ್ಲಿ ಮೀಟಿಂಗ್ ಮಾಡಿ, ವಿಚಾರ ತಿಳಿಸಿದರು. ಅದರಂತೆ ತಲಾ 2000/- ರೂ ಪಾವತಿಸುವಂತೆ ತಿಳಿಸಿದ್ದು, 35 ಜನರು ಒಟ್ಟು ಸೇರಿಸಿ ರೂ 72,000/ ರೂ.ನ್ನು ಆರೋಪಿಗಳಿಗೆ ನೀಡಲಾಗಿತ್ತು. ಒಂದು ವಾರ ಬಿಟ್ಟು ಆರೋಪಿಗಳು ಫೋನ್ ಮಾಡಿ, ಎಲ್ಲರಿಗೂ ತಲಾ 1,00,000 ರೂ ಸಾಲ ನೀಡಬೇಕಾದರೆ ಶ್ಯೂರಿಟಿ ಬೇಕು ಇಲ್ಲದೆ ಇದ್ದರೆ ಎಲ್ಲರೂ ತಲಾ ರೂ 10,000/- ನೀಡಬೇಕು ಎಂದು ತಿಳಿಸಿದ್ದರು. ಅದರಂತೆ 35 ಜನರಿಂದ ತಲಾ ರೂ 10,000/ ರೂ.ನ್ನು ತಂಗಿ ಜುಬೇದಾ ಇವರ ಮೊಬೈಲ್‍ನಿಂದ ಹಂತ ಹಂತವಾಗಿ ಗೂಗಲ್ ಪೇ ಮತ್ತು ಫೋನ್ ಪೇ ಮುಖಾಂತರ ಒಟ್ಟು ರೂ 2,19,000/ ಹಾಗೂ ನಗದಾಗಿ ರೂ 1,40,300/ ಪಾವತಿಸಲಾಗಿತ್ತು.
ಮತ್ತೆ ಆರೋಪಿಗಳು ಸಾಲ ನೀಡಬೇಕಾದರೆ ಎಲ್ಲಾ ಸದಸ್ಯರು ತಲಾ 10 ಸದಸ್ಯರಂತೆ ಮೆಂಬರ್‍ಶಿಪ್ ಮಾಡಿಸಬೇಕು ಇಲ್ಲದಿದ್ದರೆ ಸಾಲ ಕೊಡಲಾಗುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಆರೋಪಿಗಳನ್ನು ಸಂಪರ್ಕಿಸಿ ನಮಗೆ ಸಾಲ ಬೇಡಾ ಕೊಟ್ಟ ಹಣ ವಾಪಾಸು ಕೊಡಿ ಎಂದು ಹೇಳಿದ್ದರು.
ಆ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಗದೆ ತಲೆಮರೆಸಿ ಕೊಂಡಿದ್ದಾರೆ. 35 ಜನರಿಗೆ ಬಡ್ಡಿರಹಿತ 1 ಲಕ್ಷ ರೂ ಸಾಲ ನೀಡುವುದಾಗಿ ನಂಬಿಸಿ, ಒಟ್ಟು ರೂ 4,32,000/ ಪಡೆದು ಸಾಲವನ್ನು ನೀಡದೇ ಕೊಟ್ಟ ಹಣವನ್ನು ವಾಪಾಸು ನೀಡದೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.