ಕಸಬಾ ಬೆಂಗರೆ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ

ಮಂಗಳೂರು, ಎ.25: ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕಸಬಾ ಬೆಂಗರೆಯ ಅಲ್ ಮದ್ರಸತುಲ್ ದೀನಿಯ್ಯ ಅಸೋಷಿಯೇಶನ್ ವತಿಯಿಂದ ಶುಕ್ರವಾರ ಕಸಬ ಬೆಂಗರೆಯಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಅದಕ್ಕೂ ಮೊದಲು ಕಸಬಾ ಬೆಂಗರೆ ಕೇಂದ್ರ ಜುಮ್ಮಾ ಮಸೀದಿಯಿಂದ ಸೂಪರ್ ಸ್ಟಾರ್ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಸಾಕಷ್ಟು ಸಂಖ್ಯೆಯ ಮಹಿಳೆಯರು, ಮಕ್ಕಳು ಜಾಥಾ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಎಸೆಸ್ಸೆಫ್ ಮುಖಂಡ ಹಾಫಿಳ್ ಯಾಕೂಬ್ ಸಅದಿ ನಾವೂರು ಮಾತನಾಡಿ ವಕ್ಫ್ ತಿದ್ದುಪಡಿ ಕಾಯ್ದೆ ಯಿಂದ ಯಾವೊಬ್ಬ ಮುಸ್ಲಿಂ, ಕ್ರೈಸ್ತ, ಹಿಂದೂಗಳಿಗೂ ಪ್ರಯೋಜನವಿಲ್ಲ. ಬದಲಾಗಿ ಆಡಳಿತದ ಚುಕ್ಕಾಣಿ ವಹಿಸಿದವರು ಬಂಡವಾಳಶಾಹಿಗಳಿಗೆ ನೆರವು ನೀಡಲು ಮುಂದಾಗುತ್ತಿರುವುದರ ಲಕ್ಷಣ ಇದಾಗಿದೆ. ಇದು ಹಿಂದೂ-ಮುಸ್ಲಿಮರನ್ನು ಪ್ರತ್ಯೇಕಿಸುವ ಹಾಗೂ ಮತ ಕ್ರೋಢೀಕರಣದ ಷಡ್ಯಂತ್ರದ ಭಾಗವಾಗಿದೆ ಎಂದರಲ್ಲದೆ, ಷರಿಯತ್ ಸಹಿತ ಸಂವಿಧಾನಕ್ಕೆ ವಿರುದ್ಧವಾದ ಎಲ್ಲಾ ನೀತಿ-ನಿಯಮಗಳನ್ನು ನಾವು ಬಲವಾಗಿ ವಿರೋಧಿಸಲಿದ್ದೇವೆ ಎಂದು ಎಚ್ಚರಿಸಿದರು.
ಎಸ್ಕೆಎಸೆಸ್ಸೆಫ್ ನಾಯಕ ಮೌಲಾನಾ ಅನೀಸ್ ಕೌಸರಿ ಮಾತನಾಡಿ ಕೇಂದ್ರ ಸರಕಾರವು ಪ್ರತೀ ಹಂತ ದಲ್ಲೂ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ಇದೆ. ಆದರೆ ಇದರಿಂದ ಮುಸ್ಲಿಮರು ಧೃತಿಗೆಡುವುದಿಲ್ಲ. ಬದಲಾಗಿ ಸತ್ಯದ ಜೊತೆ ನಿಲ್ಲಲಿದ್ದಾರೆ. ಅನ್ಯಾಯದ ವಿರುದ್ಧ ಮತ್ತು ನ್ಯಾಯದ ಪರವಾಗಿ ಮುಂದೆಯೂ ಧ್ವನಿ ಎತ್ತಲಿದ್ದಾರೆ. ನ್ಯಾಯಾಂಗದ ಮೇಲೂ ವಿಶ್ವಾಸ ಹೊಂದಿದ್ದಾರೆ. ಹಾಗಾಗಿ ನಮಗೆ ಒಂದಲ್ಲೊಂದು ದಿನ ಜಯ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಸೀದಿಯ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಬಾ ಬೆಂಗರೆ ಜುಮಾ ಮಸೀದಿಯ ಖತೀಬ್ ಅಶ್ರಫ್ ಫೈಝಿ ಮಲಾರ್ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ ಎ.ಕೆ.ಕುಕ್ಕಿಲ, ಮುಅಐಮಿನ್ ಕೆಂಪಿ ಮಾತನಾಡಿದರು.
ವೇದಿಕೆಯಲ್ಲಿ ಸ್ಥಳೀಯ ಮಸೀದಿಗಳ ಖತೀಬರಾದ ಅನ್ಸಾರ್ ಇರ್ಫಾನಿ, ನಾಸಿರ್ ಕೌಸರಿ, ಎಎಂಡಿ ಪ್ರಧಾನ ಕಾರ್ಯದರ್ಶಿ ಕಬೀರ್, ಅಶ್ರಫ್ ಕೆ. ಜಲೀಲ್ ಕೃಷ್ಣಾಪುರ, ಅಶ್ರಫ್ ಅಡ್ಡೂರ್, ನದೀಮ್ ಸಾಬ್, ಮುನೀಬ್ ಬೆಂಗರೆ, ಬಾವುಜಾನ್ ಬೆಂಗರೆ, ಸಲೀಂ ಬಿ.ಎಚ್, ಸಿ.ಪಿ. ಮುಸ್ತಫ, ಲತೀಫ್ ಆಲಿಯ, ಇರ್ಷಾದ್ ಅಜ್ಜಿನಡ್ಕ ಮತ್ತಿತರರು ಉಪಸ್ಥಿತರಿದ್ದರು.
ಮದ್ರಸದ ವಿದ್ಯಾರ್ಥಿ ಮುಹಮ್ಮದ್ ನಿಶಾಫ್ ಕಿರಾಅತ್ ಪಠಿಸಿದರು. ಎಎಂಡಿ ಮ್ಯಾನೇಜರ್ ನಿಸಾರ್ ಸ್ವಾಗತಿಸಿದರು.







