ಕುಡುಪು ಗುಂಪು ಹತ್ಯೆ ಪ್ರಕರಣ| ಪೊಲೀಸ್ ಕಮಿಷನರ್ರಿಂದ ಮುಚ್ಚಿ ಹಾಕಲು ಯತ್ನ: ಮುನೀರ್ ಕಾಟಿಪಳ್ಳ ಆರೋಪ

ಮುನೀರ್ ಕಾಟಿಪಳ್ಳ
ಮಂಗಳೂರು: ಕುಡುಪು ಗುಂಪು ಹತ್ಯೆ ಪ್ರಕರಣವನ್ನು ಮಂಗಳೂರು ಕಮಿಷನರ್ ಮುಚ್ಚಿಹಾಕಲು ಪ್ರಜ್ಞಾ ಪೂರ್ವಕವಾಗಿ ಪ್ರಯತ್ನ ನಡೆಸಿದ್ದರು ಎಂಬುದಕ್ಕೆ ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಬಲ ಸಾಕ್ಷಿಯಾಗಿ ನಿಲ್ಲುತ್ತದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಕುಡುಪು ಸಾಮ್ರಾಟ್ ಮೈದಾನದಲ್ಲಿ ರವಿವಾರ ಮೂರು ಗಂಟೆಗೆ ಗುಂಪು ಹಲ್ಲೆಯಿಂದ ಅಪರಿಚಿತ ವ್ಯಕ್ತಿ ಯೋರ್ವ ಬಲಿಯಾಗಿದ್ದಾನೆ ಎಂಬ ಸುದ್ದಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಗಂಟೆ ಯೊಳಗಡೆ ತಲುಪಿತ್ತು. ಅದರಂತೆ ಐದು ಗಂಟೆಯ ಸುಮಾರಿಗೆ ಪೊಲೀಸರು ಹೊಡೆತಗಳಿಂದ ಜರ್ಜರಿತಗೊಂಡ ಮೃತದೇಹ ಬಿದ್ದಿದ್ದ ಸ್ಥಳವನ್ನೂ ತಲುಪಿದ್ದರು. ಸಹಜವಾಗಿ ವಿಷಯವು ಪೊಲೀಸ್ ಕಮಿಷನರ್ಗೂ ತಲುಪಿತ್ತು. ಆದರೆ ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುವ ಅಥವಾ ಮುಚ್ಚಿಹಾಕುವ ತೀರ್ಮಾನಕ್ಕೆ ಬಂದಿದ್ದರು ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಬ್ ಲಿಂಚಿಂಗ್ನಲ್ಲಿ ಪ್ರಮಖ ಪಾತ್ರ ವಹಿಸಿದ್ದ ಮಂಜುನಾಥ ಎಂಬಾತನಿಂದ ಅಪರಿಚಿತ ಶವ ಪತ್ತೆ ಎಂದು ದೂರು ಬರೆಸಿಕೊಂಡು ಯಡಿಆರ್ ದಾಖಲಿಸಿದ್ದಾರೆ. ಘಟನೆಯ ಪೂರ್ತಿ ವಿವರ ಗೊತ್ತಿದ್ದರೂ ಯಾವುದೋ ನಶೆ (ಅಮಲು)ಯಿಂದ ಬಿದ್ದು ಅಥವಾ ಯಾರೊಂದಿಗೊ ಜಗಳ ಆಡಿ, ಉರುಳಿ ಬಿದ್ದು ಮೃತ ಪಟ್ಟಿರಬಹುದು. ಮೈಯಲ್ಲಿ ತರಚಿದ ಸಾಮಾನ್ಯ ಗಾಯಗಳಿವೆ ಎಂದು ಲುಕ್ ಔಟ್ ಪ್ರಕಟನೆ ಕೊಟ್ಟು ಕೈತೊಳೆದು ಕೊಳ್ಳಲು ಯತ್ನಿಸಿದ್ದಾರೆ. ಘಟನೆಯು ಮಾಧ್ಯಮಗಳ ಪ್ರತಿನಿಧಿಗಳಿಗೆ ತಲುಪಿ ಪೊಲೀಸ್ ಕಮಿಷನರ್ ಬಳಿ ಈ ಕುರಿತು ಮಾಹಿತಿ, ಸ್ಪಷ್ಟೀಕರಣವನ್ನು ಸತತವಾಗಿ ಕೇಳಿದರೂ ವದಂತಿಗಳಿಗೆ ಕಿವಿಗೊಡಬೇಡಿ, ಕಾಯಿರಿ ಎಂದು ಪ್ರತಿಕ್ರಿಯಿಸಿ 36 ತಾಸುಗಳ ಕಾಲ ಮೌನವೃತ ಪಾಲಿಸಿದ್ದಾರೆ. ಎ.28ರಂದು ಕೆಲವು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಈ ಕುರಿತು ಧ್ವನಿ ಎತ್ತಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ, ರಾಜ್ಯ ಮಟ್ಟದಲ್ಲಿ ಚರ್ಚೆಗಳು ಶುರುವಾದ ಮೇಲೆಯಷ್ಟೆ ಕಮಿಷನರ್ ಅನುಪಮ್ ಅಗ್ರವಾಲ್ ಪೋಸ್ಟ್ಮಾರ್ಟಂ ನಡೆಸಿ, ಅದರ ವರದಿಯ ಆಧಾರದಲ್ಲಿ ಕೊಲೆ, ಮಾಬ್ ಲಿಂಚಿಂಗ್ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಎಫ್ಐಆರ್ ದಾಖಲಿಸಲು ಎರಡನೇ ದೂರುದಾರರಾಗಿ ಪೊಲೀಸರು ಆಯ್ಕೆ ಮಾಡಿದ್ದು, ಮಾಬ್ ಲಿಂಚಿಂಗ್ ಮಾಡಿದ ಕೇಶವ ಎಂಬಾತನನ್ನು. ಆತ ನೀಡಿದ ದೂರಿನಲ್ಲಿ ಪೊಲೀಸರು ಮೊದಲು ದೂರು ಬರೆಸಿಕೊಂಡ ಮಂಜುನಾಥ್ ಈ ಗುಂಪು ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿದ್ದ. ಕೇಶವ ನೀಡಿನ ದೂರಿನ ಪ್ರಕಾರ ಎಫ್ಐಆರ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪಾಕಿಸ್ತಾನ, ಪಾಕಿಸ್ತಾನ (ಜಿಂದಾಬಾದ್ ಹಾಕಿದ್ದಾನೆ ಎಂದು ಇಲ್ಲ) ಎಂದು ಬೊಬ್ಬೆ ಹೊಡೆಯುತ್ತಾ ಮೈದಾನದ ಕಡೆಗೆ ಧಾವಿಸಿ ಬರುತ್ತಿದ್ದ. ಅದನ್ನು ಗಮನಿಸಿದ ಮಂಜುನಾಥ, ಸಚಿನ್ ಮತ್ತಿತರರು ಆತ ಪಾಕಿಸ್ತಾನ... ಎಂದು ಬೊಬ್ಬೆ ಹಾಕುತ್ತಿದ್ದಾನೆ, ಬಿಡಬಾರದು ಎಂದು ನನ್ನಲ್ಲಿ ಹೇಳಿದರು, ಬೆನ್ನಟ್ಟಿ ಹೋಗಿ ಗುಂಪಾಗಿ ಥಳಿಸಿದರು, ಮರದ ತುಂಡಿನಿಂದ, ಕಾಲಿನಿಂದ ಹೊಡೆದು ತುಳಿದು ಸಾಯಿಸಿದರು, ನಾನು ತಡೆಯಲು ಯತ್ನಿಸಿದರೆ, ನನಗೆ ಗದರಿಸಿದರು. ನಾನು ಸ್ಥಳದಿಂದ ತೆರಳಿದೆ. ರಾತ್ರೆ ಮನೆಯಲ್ಲಿದ್ದಾಗ ಈ ಕುರಿತು ಸ್ವತಹ ಮಂಜುನಾಥ ಶವ ಪತ್ತೆಯಾಗಿರುವ ಕುರಿತು ಪೊಲೀಸ್ ದೂರು ನೀಡಿರುವುದು ನನಗೆ ತಿಳಿದು ಬಂತು ಎಂದು ದಾಖಲಿಸಲಾಗಿದೆ ಎಂದು ತಿಳಿಸಿದ್ದಾನೆ.
ಹಾಗಾಗಿ ಗುಂಪು ಹತ್ಯೆ ನಡೆದ 32 ಗಂಟೆಗಳ ಅವಧಿಯಲ್ಲಿ ನಡೆದಿರುವ ಈ ಎಲ್ಲಾ ಬೆಳವಣಿಗೆಗಳ ಕುರಿತು ಪ್ರತ್ಯೇಕ ತನಿಖೆ ನಡೆಯಬೇಕಿದೆ. ಗುಂಪು ಹತ್ಯೆ ನಡೆದಿರುವುದು, ಅದರಲ್ಲಿ ಭಾಗಿಯಾಗಿರುವ ಗುಂಪಿನ ಪೂರ್ಣ ಮಾಹಿತಿ ಇದ್ದೂ, ಅದೇ ಗುಂಪಿನ ಪ್ರಧಾನ ವ್ಯಕ್ತಿಯಿಂದಲೆ ಪ್ರಥಮವಾಗಿ ಪೊಲೀಸ್ ಇಲಾಖೆ ದೂರು ಬರೆಸಿಕೊಂಡದ್ದು, ದುರ್ಬಲವಾದ ಯುಡಿಆರ್, ಗೊಂದಲದ ಲುಕ್ಔಟ್ ಪ್ರಕಟನೆ ಹೊರಡಿಸಿದ್ದು, 36 ಗಂಟೆಗಳ ಕಾಲ ಪೊಲೀಸ್ ಕಮಿಷನರ್ ಸುದ್ದಿಗಾರರಿಗೂ ಮಾಹಿತಿ ನೀಡದೆ ಮೌನ ವಹಿಸಿದ್ದು ಇತ್ಯಾದಿ ವೈಫಲ್ಯ ಎದ್ದುಕಾಣುತ್ತಿದೆ. ಪೊಲೀಸರಿಗೆ ಈ ಗಂಭೀರ ಪ್ರಕರಣದಲ್ಲಿ ದೂರು ಬರೆಸಿಕೊಳ್ಳಲು ಗುಂಪಿನ ಸದಸ್ಯರಲ್ಲದೆ ಬೇರೆ ಯಾರೂ ಸಿಗಲಿಲ್ಲವೆ? ಸುಮಟೊ ದೂರು ದಾಖಲಿಸಿಕೊಳ್ಳಬಹು ದಿತ್ತಲ್ಲವೇ? ಎಂದು ಪ್ರಶ್ನಿಸಿರುವ ಮುನೀರ್ ಕಾಟಿಪಳ್ಳ ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯ ಹೊರಗಿನ ಹಿರಿಯ, ಪ್ರಾಮಾಣಿಕ, ವಿಶ್ವಾಸಾರ್ಹ, ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.