ಕುಡುಪು ಗುಂಪು ಹತ್ಯೆ ಪ್ರಕರಣ| ಗೃಹಸಚಿವರ ಹೇಳಿಕೆಗೆ ಖಂಡನೆ: ಮುಸ್ತಫಾ ಅಬ್ದುಲ್ಲಾ

ಉಳ್ಳಾಲ: ಕುಡುಪು ಸಮೀಪ ವಲಸೆ ಕಾರ್ಮಿಕನ ಹತ್ಯೆ ಪ್ರಕರಣದಲ್ಲಿ ಗೃಹಸಚಿವರು ನೀಡಿರುವ ಹೇಳಿಕೆ ಖಂಡನೀಯ. ಅಧಿಕಾರದಲ್ಲಿದ್ದು ಇಂತಹ ಮಾತು ಆಡುವುದು ಸರಿಯಲ್ಲ. ಅಂತಹವರಿಗೆ ಅಧಿಕಾರ ಕೊಡಲೇಬಾರದು ಎಂದು ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಹೇಳಿದ್ದಾರೆ.
ತೊಕ್ಕೊಟ್ಟು ಖಾಸಗಿ ಸಭಾಂಗಣದಲ್ಲಿ ಕರೆದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾಕಿಸ್ತಾನ್ ಪರ ಘೋಷಣೆ ಕೂಗಿದ ಕಾರಣ ವಲಸೆ ಕಾರ್ಮಿಕನ ಹತ್ಯೆ ನಡೆಸಲಾಗಿದೆ ಎಂದು ಗೃಹ ಸಚಿವರು ಹೇಳುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಘಟನೆಯ ಸತ್ಯಾಸತ್ಯತೆಯನ್ನು ಅರಿಯದೆ ಹೇಳಿಕೆ ನೀಡಿರುವುದು ಖಂಡನೀಯ.
ಇಂತಹ ಇನ್ನೊಂದು ಕೃತ್ಯ ಜಿಲ್ಲೆಯಲ್ಲಿ ಆಗಬಾರದು. ಗೃಹಸಚಿವರಿಗೆ ಜಿಲ್ಲೆಯಿಂದ ಮಾಹಿತಿ ಕೊಟ್ಟವರು ಯಾರು ಎಂಬುದನ್ನು ತಿಳಿಸಬೇಕಿದೆ. ಮುಂದಿನ 15 ದಿನಗಳ ಒಳಗೆ ಎಲ್ಲಾ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ಉಳ್ಳಾಲ ಕಾಂಗ್ರೆಸ್ ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷ ಅಯೂಬ್ ಮಂಚಿಲ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಆಳ್ವಿನ್ ಡಿಸೋಜ ಮಾತನಾಡಿದರು.
ಈ ಸಂದರ್ಭ ಮನ್ಸೂರ್ ಮಂಚಿಲ, ಯುವಕಾಂಗ್ರೆಸ್ ನಗರಾಧ್ಯಕ್ಷ ರಶೀದ್ ಕೋಡಿ ಉಪಸ್ಥಿತರಿದ್ದರು.