ಕಾರ್ಮಿಕ ಸಂಹಿತೆ ಕಾರ್ಮಿಕರನ್ನು ಗುಲಾಮಗಿರಿಯತ್ತ ದೂಡುವ ವ್ಯವಸ್ಥಿತ ತಂತ್ರ : ಸುನಿಲ್ ಕುಮಾರ್ ಬಜಾಲ್
ಸಿಐಟಿಯು ವತಿಯಿಂದ ಕಾರ್ಮಿಕರ ದಿನಾಚರಣೆ

ಮಂಗಳೂರು : ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಲು ಹೊರಟ ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡಲು ಉತ್ಸುಕವಾಗಿದೆಯೇ ವಿನಃ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನಲ್ಲ. ಕಾರ್ಮಿಕ ಸಂಹಿತೆಗಳನ್ನು ಜಾರಿ ಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರವು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಮೊಟಕು ಗೊಳಿಸಿ ಸಂಘ ಕಟ್ಟುವ, ಮುಷ್ಕರ ಹೂಡುವ, ಬೇಡಿಕೆ ಪಟ್ಟಿ ಇಡುವ, ಒಪ್ಪಂದ ಏರ್ಪಡಿಸುವ ಮೂಲಕ ಹಕ್ಕು ಗಳನ್ನು ನಾಶ ಮಾಡುವ ಮೂಲಕ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ದೂಡುವ ವ್ಯವಸ್ಥಿತ ತಂತ್ರ ಇದಾಗಿದೆ ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಗುರುವಾರ ನಗರದ ಮಿನಿವಿಧಾನ ಸೌಧದ ಬಳಿಯ ಎನ್‌ಜಿಒ ಹಾಲ್‌ನಲ್ಲಿ ಜರುಗಿದ ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾತಿ, ಧರ್ಮ, ಲಿಂಗ, ಪಕ್ಷಮ ಪಂಗಡ ಭೇದ ಭಾವವಿಲ್ಲದೆ ದುಡಿಯುವ ವರ್ಗದ ಐಕ್ಯತೆಯನ್ನು ಪ್ರತಿ ಪಾದಿಸುವ ಮೇ ದಿನವು ಅತ್ಯಂತ ಮಹತ್ವದ ದಿನವಾಗಿದೆ. ಬದಲಾದ ಕಾಲಘಟ್ಟದಲ್ಲಿ ದುಡಿಯುವ ವರ್ಗದ ಸಿದ್ಧಾಂತದಿಂದ ಮಾತ್ರವೇ ನಾಡಿನ ಜನತೆಯನ್ನು ಒಂದಾಗಿಸಲು ಸಾಧ್ಯ. ಯಾಕೆಂದರೆ ಅದರಲ್ಲಿ ಮಾನವೀಯ ಮೌಲ್ಯಗಳಿವೆ, ಸೌಹಾರ್ದತೆಯ ಆಶಯಗಳಿವೆ. ಸಹೋದರತೆಯ ಗುಣಗಳಿವೆ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪಕೊಂಚಾಡಿ ಮಾತನಾಡಿದರು. ಮೇ ದಿನ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕಿಂತ ಮುಂಚೆ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯಿಂದ ಕಾರ್ಮಿಕರ ಮೆರವಣಿಗೆ ನಡೆಸಲಾಯಿತು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ರವಿಚಂದ್ರ ಕೊಂಚಾಡಿ, ಮುಝಾಫರ್ ಅಹ್ಮದ್, ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ಚರಣ್ ಶೆಟ್ಟಿ, ಬಿಎನ್ ದೇವಾಡಿಗ, ವಸಂತ ಕುಮಾರ್, ಲೋಯ್ಡ್ ಡಿಸೋಜ, ಬಿಎಂ ಮಾಧವ, ಫಾರೂಕ್, ಪದ್ಮಾವತಿ ಶೆಟ್ಟಿ ಉಪಸ್ಥಿತರಿದ್ದರು.







