ಬೆಳ್ತಂಗಡಿ: ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

ಗುರುವಾಯನಕೆರೆ ಜೈನ್ ಪೇಟೆ ಕಿಡಿಗೇಡಿಗಳ ಕಲ್ಲೆಸೆತದಿಂದ ಖಾಸಗಿ ಬಸ್ಸಿನ ಗಾಜಿಗೆ ಹಾನಿಯಾಗಿದೆ.
ಬೆಳ್ತಂಗಡಿ: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಹಿನ್ನೆಲೆಯಲ್ಲಿ ಸಂಘ ಪರಿವಾರ ಕರೆ ನೀಡಿದ್ದ ದ.ಕ. ಜಿಲ್ಲಾ ಬಂದ್ ಗೆ ಬೆಳ್ತಂಗಡಿ ತಾಲೂಕಿನಲ್ಲಿ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿನಲ್ಲಿ ಅಂಗಡಿಮುಂಗಟ್ಟುಗಳು ಬಹುತೇಕ ಮುಚ್ಚಿದ್ದು, ಖಾಸಗಿ ವಾಹನಗಳು ಎಂದಿನಂತೆ ಓಡಾಟ ನಡೆಸುತ್ತಿವೆ.
ತಾಲೂಕಿನಲ್ಲಿ ಹಲವೆಡೆ ರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಬಂದ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕಕ್ಕಿಂಜೆ, ಮುಂಡಾಜೆ, ಹಾಗೂ ಗೇರುಕಟ್ಟೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಸ್ಸಿಗೆ ಕಲ್ಲು: ಗುರುವಾಯನಕೆರೆ ಜೈನ್ ಪೇಟೆ ಸಮೀಪ ಖಾಸಗಿ ಬಸ್ಸಿಗೆ ಕಲ್ಲು ಹೊಡೆಯಲಾಗಿದ್ದು, ಬಸ್ಸಿನ ಮುಂದಿನ ಗಾಜು ಸಂಪೂರ್ಣ ಒಡೆದು ಹೋಗಿದೆ.
ಉಳಿದಂತೆ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು, ಅಳದಂಗಡಿ, ಕೊಕ್ಕಡ ಧರ್ಮಸ್ಥಳ ಸೇರಿದಂತೆ ಬಹುತೇಕ ಪ್ರದೇಶ ಗಳಲ್ಲಿ ಅಂಗಡಿಗಳು ಸಂಪೂರ್ಣ ಬಂದ್ ಆಗಿದೆ. ಬೆಳಗ್ಗೆ ಕೆಲವು ಹೋಟೆಲ್ ಗಳು ತೆರೆದಿದ್ದರೂ ಬಳಿಕ ಅವುಗಳು ಮುಚ್ಚಲ್ಪಟ್ಟವು.
ಕೆಎಸ್ಸಾರ್ಟಿಸಿ ಬಸ್ಸುಗಳು ಸ್ಥಳೀಯವಾಗಿ ಓಡಾಟ ನಡೆಸಿದವು. ಧರ್ಮಸ್ಥಳದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವ ಬಸ್ಸುಗಳು ಸಂಚರಿಸಿದವು. ಮಂಗಳೂರಿಗೆ ಮಾತ್ರ ಬಸ್ ಗಳು ಓಡಾಟ ನಡೆಸಿಲ್ಲ. ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿರುವುದು ಕಂಡು ಬಂತು. ಪೊಲೀಸರು ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.