ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್: ಸ್ಪೀಕರ್ ರಾಜೀನಾಮೆ ನೀಡಲು ಶಾಸಕ ಭರತ್ ಶೆಟ್ಟಿ ಆಗ್ರಹ

ಮಂಗಳೂರು : ಪೊಲೀಸ್ ಇಲಾಖೆಯ ತನಿಖೆಗೆ ಮುನ್ನವೇ ಸ್ಪೀಕರ್ ಯು.ಟಿ. ಖಾದರ್ ಅವರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಧಾನ ಸೂತ್ರದಾರನೂ ಆಗಿರುವ ಫಾಝಿಲ್‌ನ ಸಹೋದರನೊಂದಿಗೆ ಮಾತ ನಾಡಿ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡಿರುವುದು ತನಿಖೆಯ ಹಾದಿ ತಪ್ಪಿಸುವ ಕೆಲಸವಾಗಿದೆ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಈ ಮೂಲಕ ಸ್ಪೀಕರ್ ಸ್ಥಾನದ ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ಸುಹಾಸ್ ಶೆಟ್ಟಿ ಪ್ರಕರಣದ ತನಿಖೆಯಲ್ಲಿ ಫಾಝಿಲ್ ಸಹೋದರ ಭಾಗಿಯಾಗಿದ್ದಾನೆ ಎಂದು ಗೃಹಮಂತ್ರಿಯು ಪೊಲೀಸ್ ಆಯುಕ್ತರ ಸಮ್ಮುಖ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಫಾಝಿಲ್ ಮನೆ ಅಥವಾ ಕುಟುಂಬಸ್ಥರು ಯಾರೂ ಕೂಡ ಈ ಘಟನೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಅಂತ ಮಾಧ್ಯಮಕ್ಕೆ ಸ್ಪೀಕರ್ ಯು.ಟಿ ಖಾದರ್ ಹೇಳಿಕೆ ನೀಡಿದ್ದು ಹೇಗೆ? ಫಾಝಿಲ್‌ರ ಸಹೋದರ ಜತೆ ಮಾತಾಡಿದ್ದೇನೆ ಅಂತ ಸ್ವತಃ ಖಾದರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಪೊಲೀಸರ ವಶದಲ್ಲಿರುವಾಗ ಮಾತನಾಡಿದ್ದು ಹೇಗೆ? ಪೊಲೀಸರು ಆರೋಪಿಗಳ ಜತೆ ಮಾತನಾಡಲು ಅವಕಾಶ ಕಲ್ಪಿಸಿದ್ದು ಹೇಗೆ? ಆರೋಪಿಗಳನ್ನು ರಕ್ಷಿಸಲು ಸ್ಪೀಕರ್ ಪ್ರಯತ್ನಿಸಿದ್ದಾರೆಯೇ? ಈ ಪ್ರಕರಣದಲ್ಲಿ ಸ್ಪೀಕರ್‌ರ ಪಾತ್ರ ಕುರಿತು ಸಂಶಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಸ್ಪೀಕರ್ ರಾಜೀನಾಮೆ ನೀಡಬೇಕು ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.