ಸಮಯದಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ: ಮಜೀದ್ ಫಾಳಿಲ್

ಉಳ್ಳಾಲ: ಸಮಾಜದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೇವೆ. ಆದರೆ ಸಮಯದಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯ ಇಲ್ಲ. ಈ ಸಮಯವನ್ನು ಸದುಪಯೋಗಪಡಿಸಿ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ನಾವು ನಿರ್ವಹಿಸಬೇಕು ಎಂದು ಕೇಂದ್ರ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಫಾಳಿಲ್ ಹೇಳಿದರು.
ಅವರು ಉಳ್ಳಾಲ ದರ್ಗಾದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ರವಿವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮುಸ್ಲಿಮರಿಗೆ ಅಗತ್ಯವಾದುದು ಈಮಾನ್ ಆಗಿದೆ. ಇದನ್ನು ನಾವು ವೃದ್ಧಿ ಮಾಡಬೇಕು. ಪ್ರವಾದಿಯವರು ಜೀವನದಲ್ಲಿ ಅನುಸರಿಸಿದ ದಾರಿಯಲ್ಲಿ ನಾವು ಜೀವಿಸಬೇಕು. ಆಗ ಮಾತ್ರ ಧರ್ಮ ನಮ್ಮಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ ಎಂದು ಕರೆ ನೀಡಿದರು.
ಫಾರೂಕ್ ನಯೀಮಿ ಕೊಲ್ಲಮ್ ಧಾರ್ಮಿಕ ಪ್ರವಚನ ನೀಡಿದರು. ಸಯ್ಯಿದ್ ಮುನೀರ್ ಅಹ್ದಲ್ ತಂಙಳ್ ದುಆ ನೆರವೇರಿಸಿದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತೊಕ್ಕೊಟ್ಟು ಅಲ್ ಹಿದಾಯ ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್, ಖತೀಬ್ ಅಬ್ದುಲ್ ರಝಾಕ್ ಲತೀಫಿ,ಅಕ್ಕರೆ ಕೆರೆ ಅಬೂಬಕ್ಕರ್ ಸಿದ್ದೀಕ್ ಮಸೀದಿಯ ಇಮಾಮ್ ಉಸ್ಮಾನ್ ಸಅದಿ ಅಲ್ ಫಾಳಿಲಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ನಝೀರ್ ಉಳ್ಳಾಲ, ಅಶ್ರಫ್ ,ಮೊಯ್ದಿನ್ ಕುಂಞಿ ಪೇಟೆ, ಮೊಯ್ದಿನ್ ಹಾಜಿ,ಅಬೂಬಕ್ಕರ್ ಹೈದರಲಿ ನಗರ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.







