ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮಕ್ಕೆ ಸಿಪಿಐಎಂ ಆಗ್ರಹ

ಹರೀಶ್ ಪೂಂಜ
ಬೆಳ್ತಂಗಡಿ: ತೆಕ್ಕಾರು ಬ್ರಹ್ಮಕಲಶೋತ್ಸವ ಸಂದರ್ಭ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿರುವಾಗಲೇ ಧಾರ್ಮಿಕ ವೇದಿಕೆಯನ್ನು ದುರುಪಯೋಗಪಡಿಸಿ ಹಿಂದು ಧರ್ಮಕ್ಕೆ ಕಳಂಕ ಬರುವಂತೆ ಮಾತಾಡಿದ ಶಾಸಕ ಹರೀಶ್ ಪೂಂಜರ ನಡೆಯನ್ನು ಸಿಪಿಐಎಂ ಖಂಡಿಸಿದೆ, ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಒತ್ತಾಯಿಸಿದ್ದಾರೆ.
ಈ ರೀತಿ ಕಾನೂನು ಬಾಹಿರವಾಗಿ ನಡಕೊಂಡ ಶಾಸಕ ಹರೀಶ್ ಪೂಂಜ ವಿರುದ್ಧ ಸೂಕ್ತ ಕಠಿಣ ಕಲಂಗಳಡಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ತಕ್ಷಣ ಬಂಧಿಸಬೇಕು ಎಂದು ಸಿಪಿಐಎಂ ಒತ್ತಾಯಿಸುತ್ತದೆ ಎಂದರು.
ಓರ್ವ ಜನಪ್ರತಿನಿಧಿಯಾಗಿದ್ದುಕೊಂಡು ರೌಡಿಶೀಟರ್ಗಳನ್ನು ಗೌರವಿಸುವ ಮನೋಭಾವನೆಯ ಇವರು ಭಾರತ ದೇಶದ ಪ್ರಜೆಗಳನ್ನು ಅಂದರೆ ಭಾರತೀಯರನ್ನು ಕಂಟ್ರಿಗಳೆಂದು ಸಂಭೋದಿಸುವ ಇಂತಹ ಜನವಿರೋಧಿ ಶಾಸಕರನ್ನು ಪಡೆದ ಬೆಳ್ತಂಗಡಿ ತಾಲೂಕಿನ ಜನತೆ ಹಾಗೂ ಹಿಂದು ಧರ್ಮದ ಮೇಲೆ ಗೌರವ ಇರುವವರು ಮತ್ತು ನೈಜ ಹಿಂದುಗಳು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ ಎಂಬುದು ಸಿಪಿಐಎಂ ಅಭಿಪ್ರಾಯ ಪಡುತ್ತದೆ ಎಂದವರು ಹೇಳಿದರು.
ದ.ಕ. ಜಿಲ್ಲೆ ಅತ್ಯಂತ ಕೋಮು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದ ಗೃಹ ಸಚಿವರು ಇದಕ್ಕಾಗಿ ಆಂಟಿ ಕಮ್ಯೂನಲ್ ಸ್ಕಾಡ್ ರಚನೆಯ ಹೇಳಿಕೆಯ ಬೆನ್ನಲ್ಲೇ ಇಂತಹ ಅವಮಾನಕಾರಿ, ಅಸಹ್ಯ ಹಾಗೂ ಸಂವಿಧಾನ ವಿರೋದಿ ಹೇಳಿಕೆಯನ್ನು ನಿಷೇದಾಜ್ಞೆ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ದುರುಪಯೋಗ ಪಡಿಸಿಕೊಂಡು ಮಾತಾಡಿದ್ದನ್ನು ನೋಡಿದರೆ ಇವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದರು.
ದ್ವೇಷ ಭಾಷಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ಗೃಹ ಸಚಿವರ ಮಾತಿಗೆ ಬೆಲೆ ನೀಡಿ ಪೋಲೀಸ್ ಇಲಾಖೆ ತಕ್ಷಣ ಶಾಸಕರ ಮೇಲೆ ಕಠಿಣ ಕಲಂಗಳಡಿ ಪ್ರಕರಣ ದಾಖಲಿಸಿ ಅವರನ್ನು ತಕ್ಷಣ ಬಂಧಿಸಲು ಮುಂದಾಗಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ ಎಂದರು. ಈ ಶಾಸಕರ ದುರ್ನಡತೆ ವಿರುದ್ಧ ಸಿಪಿಐಎಂ ಪಕ್ಷ ಪೋಲೀಸ್ ದೂರು ನೀಡಲಿದೆ ಎಂದೂ ಅವರು ಈ ಸಂದರ್ಭ ತಿಳಿಸಿದರು.