ಮಂಗಳೂರು| ಅಶ್ರಫ್‌ನ ಗುಂಪು ಹತ್ಯೆ ಪ್ರಕರಣ: ಪೊಲೀಸರಿಂದ ಮಾಹಿತಿ ಸಂಗ್ರಹ

ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ಗುಂಪುವಿನಿಂದ ಥಳಿತಕ್ಕೊಳಗಾಗಿ ಕೊಲೆಯಾದ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ಅಶ್ರಫ್‌ನ ಮಾನಸಿಕ ಆರೋಗ್ಯ ಸಹಿತ ಇತರ ಸ್ಥಿತಿಗತಿಯ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಅದರಂತೆ ಕೇರಳದಲ್ಲಿ ಮಂಗಳೂರಿನ ಪೊಲೀಸರು ಅಶ್ರಫ್ ಕುರಿತಂತೆ ಮಾಹಿತಿ ಕಲೆ ಹಾಕತೊಡಗಿದ್ದಾರೆ.
ಅಶ್ರಫ್ 9ನೆ ತರಗತಿಯಲ್ಲಿರುವಾಗಲೇ ಮಾನಸಿಕ ಅಸ್ವಸ್ಥನಾಗಿದ್ದ, ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಮನೆಮಂದಿ ತಿಳಿಸಿದ್ದರು. ಅದನ್ನು ಖಾತರಿಪಡಿಸಲು ಮಂಗಳೂರಿನ ಪೊಲೀಸರ ತಂಡ ಇಡುಕ್ಕಿ ಜಿಲ್ಲೆಯ ತೊಡುಪುಳದ ಪೈಂಗುಳಂ ಎಂಬಲ್ಲಿನ ಮನೋರೋಗ ಚಿಕಿತ್ಸೆಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಮಲಪ್ಪುರಂ ಜಿಲ್ಲೆಯ ವೆಟ್ಟಂ ಎಂಬಲ್ಲಿನ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಅಶ್ರಫ್‌ಗೆ ಆರಂಭಿಕ ಚಿಕಿತ್ಸೆ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರ ತಂಡ ಅಲ್ಲಿಗೂ ತೆರಳಿ ವಿಚಾರಣೆ ನಡೆಸಿದೆ.
ಅಶ್ರಫ್ ಮಂಗಳೂರಿನಲ್ಲಿ ಗುಜರಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದರು. ಅದರಂತೆ ಪೊಲೀಸರು ಗುಜರಿ ಸಾಮಗ್ರಿಗಳನ್ನು ಖರೀದಿ ಮಾಡುವ ನಗರದ ಅಂಗಡಿಗಳ ಮುಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಂಗಡಿಯೊಂದಕ್ಕೆ ಅಶ್ರಫ್ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗುವ ದೃಶ್ಯವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆ ದೃಶ್ಯದಲ್ಲಿ ಕಾಣುವ ವ್ಯಕ್ತಿ ಅಶ್ರಫ್ ಎಂಬುದಾಗಿ ಸಹೋದರ ಅಬ್ದುಲ್ ಜಬ್ಬಾರ್ ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಅಶ್ರಫ್‌ನನ್ನು ಕೊಲೆಗೈದ ಆರೋಪಿಗಳಿಂದ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಿಂದ ಮಾಹಿತಿ ಡಿಕೋಡ್ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.