ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಚಾರ: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು
ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ

ಬಜ್ಪೆ: ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಕೊಲೆಯಲ್ಲಿ ಬಜ್ಪೆ ಪೊಲೀಸರ ಪಾತ್ರವಿದ್ದು, ಆರೋಪಿಗಳಿಗೆ ಪೊಲೀಸರೇ ಸಹಕಾರ ನೀಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ನಿರಾಧಾರ ಆರೋಪ ಮಾಡಲಾಗಿದೆ ಎಂದು ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ಎಂ. ಶೇಕ್ ದೂರು ನೀಡಿದ್ದಾರೆ.
ಈ ಸಂಬಂಧ ಮೂಡುಬಿದಿರೆಯ ಸಮಿತ್‌ರಾಜ್ ಧರೆಗುಡ್ಡೆ ಮತ್ತು ಹಿಂದೂ ಜಾಗರಣ ವೇದಿಕೆಯ ಮುಖಂಡ ಉಲ್ಲಾಸ್ ಟಿ. ಎಂಬವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಸಮಿತ್‌ರಾಜ್ ಧರೆಗುಡ್ಡೆ ಎಂಬಾತನು "ಸುಹಾಸ್ ಶೆಟ್ಟಿಯ ಹತ್ಯೆಯಲ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಶೀದ್‌ನ ನೇರ ಕೈವಾಡ. ಯಾವಾಗ ಬಂಧನ ಮಾಡುತ್ತೀರಿ" ಎಂದು ವಾಟ್ಸಾಪ್ ಸ್ಟೇಸ್ ನಲ್ಲಿ ಹಾಕಿಕೊಂಡಿದ್ದಾನೆ. ಅಲ್ಲದೆ ಹಿದೂ ಜಾಗರಣ ವೇದಿಕೆಯ ಮುಖಂಡ ಉಲ್ಲಾಸ್ ಟಿ ಎಂಬಾತ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೇರಿ ಸಿಬ್ಬಂದಿ ಶಾಮೀಲಾಗಿದ್ದಾರೆ. ಅಲ್ಲದೆ, ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿ ದಂತೆ ಸುದ್ದಿಗೋಷ್ಠಿ ನಡೆಸಿ ಸುಳ್ಳುಗಳನ್ನು ಹರಡಿ ಧ್ವೇಷ ಹುಟ್ಟಿಸುವ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧ್ವೇಷ ಹುಟ್ಟುಹಾಕುವಂತಿದೆ. ಹಾಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ರಶೀದ್ ಅವರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಬಜ್ಪೆ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.





