ಬೆಳ್ತಂಗಡಿ ಶಾಸಕ ಹರೀಶ್ ಪೂಂಜಗೆ ದ್ವೇಷ ಭಾಷಣವೇ ಬಂಡವಾಳ: ರಕ್ಷಿತ್ ಶಿವರಾಂ

ಬೆಳ್ತಂಗಡಿ; ಶಾಸಕ ಹರೀಶ್ ಪೂಂಜ ಅವರಿಗೆ ದ್ವೇಷ ಭಾಷಣವೇ ಬಂಡವಾಳವಾಗಿದೆ. ಅವರ ವಿರುದ್ದ ಸಾಕಷ್ಟು ಕ್ರಮಿನಲ್ ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಅವರ ಮೇಲೆ ರೌಡಿ ಶೀಟ್ ಹಾಕಿ ಗಡಿಪಾರು ಮಾಡಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ತಾಲೂಕಿನ ನಾಗರಿಕರು ತಲೆ ತಗ್ಗಿಸುವ ರೀತಿಯಲ್ಲಿ ಶಾಸಕರು ಮಾತನಾಡಿದ್ದಾರೆ. ಜಿಲ್ಲೆಯ ಯಾವ ಶಾಸಕರೂ ದ್ವೇಷ ಭಾಷಣ ಮಾಡಿಲ್ಲ ಆದರೆ ಹರೀಶ್ ಪೂಂಜರು ಸಾವಿನ ಮನೆಯಲ್ಲಿ ರಣಹದ್ದಿನ ಹಾಗೆ ಹೋಗಿ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಹರೀಶ್ ಪೂಂಜರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಎಂದು ಒತ್ತಾಯಿಸಿದರು. ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಹರೀಶ್ ಪೂಂಜರು ರಾಜಕೀಯ ಅಸ್ತಿತ್ವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹರೀಶ್ ಪೂಂಜರ ದ್ವೇಷದ ರಾಜಕೀಯದಿಂದಾಗಿ ಬೆಳ್ತಂಗಡಿ ಯಲ್ಲಿ ಅಭಿವೃದ್ದಿ ಸಂಪೂರ್ಣ ಕುಂಟಿತವಾ ಗಿದೆ. ಎಲ್ಲರೊಂದಿಗೆ ದ್ವೇಷ ಸಾಧಿಸಿದ್ದೇ ಅವರ ಸಾಧನೆಯಾಗಿದೆ. ಒಳ್ಳೆಯ ವಿಚಾರಕ್ಕೆ ಬೇಕಾಗಿ ಕೆಲಸ ಮಾಡಿ ಆಗ ಎಲ್ಲರೂ ನಿಮ್ಮದಿಗೆ ನಿಲ್ಲುತ್ತಾರೆ ಅದು ಬಿಟ್ಟು ದ್ವೇಷವನ್ನು ಕಾರಬೇಡಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯಗಳಾಗುತ್ತಿದೆ. ಆದರೆ ಇಲ್ಲಿ ಮಾತ್ರ ಆಗುತ್ತಿಲ್ಲ ಎಂದರು.
ದೇವಸ್ಥಾನದ ವೇದಿಕೆಯಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಧಾರ್ಮಿಕ ವೇದಿಕೆಯಲ್ಲಿ ಇಂತಹ ಮಾತು ಬೇಕಿತ್ತೇ ಎಂದು ಪ್ರಶ್ನಿಸಿದರು. ಹರೀಶ್ ಪೂಂಜರು ಎಲ್ಲಿಯೂ ದೇವಸ್ಥಾನಗಳನ್ನು ಕಟ್ಟಿಲ್ಲ ಯಾರೋ ಕಟ್ಟಿದ ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗುತ್ತಿದ್ದಾರೆ. ಜನರು ಭಕ್ತಿಯಿಂದ ದೇವಸ್ಥಾನ ಕಟ್ಟಿರುತ್ತಾರೆ ಅಂತಹ ಕಡೆ ಹೋಗಿ ದ್ವೇಷ ಭಾಷಣವನ್ನೇ ಮಾಡಿದ್ದಾರೆ. ಜನರನ್ನು ವಿಭಜಿಸುತ್ತಿದ್ದಾರೆ. ಪವಿತ್ರವಾದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇದಿಕೆಗೆ ಹೋಗಿ ಮುಸ್ಲಿಮರ ವಿರುದ್ದ ಅತ್ಯಂತ ಕಟ್ಟದಾಗಿ ದ್ವೇಷತುಂಬಿದ ಮಾತನ್ನು ಆಡಿದ್ದಾರೆ ಇಂತಹ ಶಾಸಕರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉಸ್ತುವಾರಿ ಸಚಿವರ ಕುಟುಂಬದ ವಿರುದ್ಧ ಮಾತನಾಡಿದ ಶಾಸಕರ ನಡೆ ಅತ್ಯಂತ ಹೀನಕಾರ್ಯ ವಾಗಿದೆ. ಅವರ ಕುಟುಂಬದ ಬಗ್ಗೆ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ರಾಜಕೀಯದ ಬಗ್ಗೆ ಟೀಕೆ ಮಾಡಿ ಅದಕ್ಕೆ ಅವರು ಉತ್ತರ ನೀಡುತ್ತಾರೆ ಅದುಬಿಟ್ಟು ಅವರ ಕುಟುಂಬದ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಶಾಂತಿ ದೂತನಾಗಿ ಕೆಲಸ ಮಾಡುವವರು ಯು.ಟಿ ಖಾದರ್ ಅವರು ವಿರುದ್ಧವೂ ಮಾತನಾಡುತ್ತಿದ್ದಾರೆ ಇದೆಲ್ಲದರ ಉದ್ದೇಶ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಯಾಗಬೇಕು ಎಂಬುದಾಗಿದೆ ಎಂದು ಆರೋಪಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಕೆ. ಸತೀಶ್ ಕಾಶಿಪಟ್ನಗ್ರಾಮೀಣ ಬ್ಲಾಕ್ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ದ ಅಧ್ಯಕ್ಷ ಪಿ ಟಿ ಸೆಬಾಸ್ಟಿನ್, ಜಿಲ್ಲಾ ಕೆ.ಡಿ.ಪಿ ಸದಸ್ಯ ಸಂತೋಷ್ ಕುಮಾರ್, ಮಹಿಳಾ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ವಂದನ ಬಂಡಾರಿ. ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಕಿಂ ಕೊಕ್ಕಡ, ಗ್ರಾಮೀಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಝರ್ ನಾವುರೂ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಮಹಮದ್ ಹನೀಫ್ ಉಜಿರೆ ಹಾಗೂ ಇತರರು ಇದ್ದರು.







