ಬ್ಯಾರಿ ಜನಾಂಗವನ್ನು ಅವಹೇಳನಗೈದ ಶಾಸಕ ಹರೀಶ್ ಪೂಂಜಗೆ ಹೈಕೋರ್ಟ್ನಲ್ಲಿ ಮುಖಭಂಗ: ಶಾಹುಲ್ ಹಮೀದ್
"ನೂರು ಕೇಸ್ ದಾಖಲಾದರೂ ಹೆದರುವುದಿಲ್ಲ ಎಂದಿದ್ದ ಪೂಂಜ ಒಂದೇ ಎಫ್ಐಅರ್ಗೆ ಹೆದರಿರುವುದು ಸ್ಪಷ್ಟ"

ಹರೀಶ್ ಪೂಂಜ - ಶಾಹುಲ್ ಹಮೀದ್
ಮಂಗಳೂರು, ಮೇ 8: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬ್ಯಾರಿ ಜನಾಂಗವನ್ನು ನಿಂದಿಸಿ ಕೋಮುದ್ವೇಷ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಗೆ ಹೈಕೋರ್ಟ್ನಲ್ಲಿ ಮುಖಭಂಗವಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಮುದ್ವೇಷ ಮಾಡಿದ್ದ ಹರೀಶ್ ಪೂಂಜಾ ನೂರು ಕೇಸ್ ದಾಖಲಾದರೂ ಹೆದರುವುದಿಲ್ಲ ಎಂದಿದ್ದರು. ಆದರೆ ಇದೀಗ ಒಂದೇ ಎಫ್ಐಅರ್ಗೆ ಪೂಂಜ ಹೆದರಿರುವುದು ಸ್ಪಷ್ಟ ಎಂದು ಶಾಹುಲ್ ಹಮೀದ್ ಕುಟುಕಿದ್ದಾರೆ.
ಹರೀಶ್ ಪೂಂಜಾರ ಆರಂಭ ಶೂರತನ ಕರಗಿ ಅವರಲ್ಲಿ ಕಾನೂನಿನ ಭಯ ಆವರಿಸಿರುವುದು ಅವರ ನಡೆಯಿಂದ ಗೋಚರಿಸುತ್ತಿದೆ. ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವ ಹರೀಶ್ ಪೂಂಜರಿಗೆ ಉಚ್ಛ ನ್ಯಾಯಾಲಯದಲ್ಲೂ ಮುಖಭಂಗ ಉಂಟಾಗಿದೆ. ಎಫ್ಐಅರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಹರೀಶ್ ಪೂಂಜ ಸಲ್ಲಿಸಿದ್ದ ರಿಟ್ ಅರ್ಜಿಗೆ ಉಚ್ಛ ನ್ಯಾಯಲಯ ಪ್ರಾಮುಖ್ಯತೆ ನೀಡಿಲ್ಲ. ಪ್ರಕರಣ ರದ್ದುಗೊಳಿಸುವ ಬಗ್ಗೆ ಹೈಕೋರ್ಟ್ ಯಾವುದೇ ಆದೇಶ ನೀಡದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ರಿಟ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಹರೀಶ್ ಪೂಂಜ ಪರ ವಕೀಲರು ಹೈಕೋರ್ಟ್ನ ರಜಾಕಾಲದ ಏಕಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಜನಪ್ರತಿನಿಧಿಗೆ ಸಂಬಂಧಿಸಿದ ಪ್ರಕರಣದ ಅರ್ಜಿಯು ಹೈಕೋರ್ಟ್ ನ್ಯಾಯಪೀಠದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಾಧೀಶರು ಮೌಖಿಕವಾಗಿ ತಿಳಿಸಿ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ಅರ್ಜಿಯನ್ನು 20ಕ್ಕೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಾರ್ಗೆ ಆದೇಶಿಸಿದೆ.
ಮುಂದಿನ ವಿಚಾರಣೆಯಲ್ಲಿ ಹರೀಶ್ ಪೂಂಜ ಅವರ ಪುನರಾವರ್ತಿತ ಕೋಮುದ್ವೇಷ ಭಾಷಣಗಳ ಬಗ್ಗೆ ಕಾಂಗ್ರೆಸ್ ಸರಕಾರ ಮತ್ತು ದೂರುದಾರರು ಉಚ್ಛ ನ್ಯಾಯಲಯಕ್ಕೆ ಗಮನಕ್ಕೆ ತಂದು ಎಫ್ಐಅರ್ ರದ್ದುಗೊಳಿಸದಂತೆ ಮನವಿ ಮಾಡಲಿದೆ. ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಆಗಲ್ಲ ಎಂಬ ವಿಶ್ವಾಸ ಇದೆ. ಕೋಮುದ್ವೇಷಿ ಶಾಸಕ ಹರೀಶ್ ಪೂಂಜ ರಿಗೆ ಈ ಬಾರಿ ತಕ್ಕ ಶಾಸ್ತಿ ಆಗಲಿದ್ದು, ಈ ಪ್ರಕರಣ ಕೋಮು ದ್ವೇಷ ಭಾಷಣ ಮಾಡುವವರಿಗೆ ಒಂದು ಪಾಠವಾಗಲಿದೆ ಎಂಬ ಭರವಸೆ ಇದೆ ಎಂದು ಕೆ.ಕೆ ಶಾಹುಲ್ ಹಮೀದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.