ಬಿ ಹ್ಯೂಮನ್ ಸಂಸ್ಥೆಯ ನೂತನ ಚೈರ್‌ಮ್ಯಾನ್ ಆಗಿ ಮುಹಮ್ಮದ್ ಶರೀಫ್ ವೈಟ್‌ಸ್ಟೋನ್ ಆಯ್ಕೆ

ಮಂಗಳೂರು, ಮೇ 13: ಬಿ ಹ್ಯೂಮನ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ನಗರದ ವೈಟ್‌ಸ್ಟೋನ್ ಪ್ರೀಮಿಯರ್ ಹೊಟೇಲಿನ ಸಭಾಂಗಣದಲ್ಲಿ ಬಿ ಹ್ಯೂಮನ್ ಸ್ಥಾಪಕ ಅಧ್ಯಕ್ಷ ಆಸೀಫ್ ಡೀಲ್ಸ್‌ರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಸ್ಥೆಯ ಪೋಷಕ ಅಬ್ಬಾಸ್ ಅಹ್ಮದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ನೂತನ ಚೈರ್‌ಮ್ಯಾನ್ ಆಗಿ ಮುಹಮ್ಮದ್ ಶರೀಫ್ ವೈಟ್‌ಸ್ಟೋನ್ ಅವರನ್ನು ಆಯ್ಕೆ ಮಾಡಲಾಯಿತು.
ಬಳಿಕ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು ನೀಡುವುದಾಗಿ ಮತ್ತು ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಯುನಿಟ್ ಸ್ಥಾಪಿಸುವ ಬಗ್ಗೆ ಘೋಷಿಸಿದರು.
ಆಸೀಫ್ ಡೀಲ್ಸ್ ಮಾತನಾಡಿ ಕಳೆದ 10 ವರ್ಷಗಳಲ್ಲಿ ಸಂಸ್ಥೆ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಬಡವರ, ನಿರ್ಗತಿಕರ ಹಾಗೂ ಬಡ ರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿದೆ. ಕಳೆದ ಎರಡುವರೆ ವರ್ಷಗಳಲ್ಲಿ ಡಯಲಿಸಿಸ್ ರೋಗಿಗಳಿಗೆ ಉಚಿತ ಡಯಾಲಿಸಿಸ್‌ಗೆ ಸುಮಾರು 80 ಲಕ್ಷಕ್ಕೂ ಅಧಿಕ ಮೊತ್ತ ವನ್ನು ವ್ಯಯಿಸಿದೆ ಎಂದರು.
ಪುತ್ತೂರು ಕಮ್ಯುನಿಟಿ ಸೆಂಟರ್‌ನ ಮುಖ್ಯಸ್ಥ ಹನೀಫ್ ಪುತ್ತೂರು, ಹೋಪ್ ಫೌಂಡೇಶನ್ ಸ್ಥಾಪಕ ಸೈಫ್, ಮೇಕ್ ಎ ಚೇಂಜ್ ಸಂಸ್ಥೆಯ ಮುಖ್ಯಸ್ಥ ಸುಹೈಲ್ ಕಂದಕ್ ಅವರು ಬಿ ಹ್ಯೂಮನ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಸಂಸ್ಥೆಯ ಟ್ರಸ್ಟಿ, ನ್ಯಾಯವಾದಿ ಮುಝಫರ್ ಅಹ್ಮದ್ ವಿವರಿಸಿದರು. ಸಂಸ್ಥೆಯ ಟ್ರಸ್ಟಿ ಮುಹಮ್ಮದ್ ಸಿರಾಜ್ ಸ್ವಾಗತಿಸಿದರು. ಸಂಸ್ಥೆಯ ಕಾನೂನು ಸಲಹೆ ಗಾರ, ನ್ಯಾಯವಾದಿ ಜೀಶನ್ ಅಲಿ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ಟ್ರಸ್ಟಿ ಮುಹಮ್ಮದ್ ಆಹ್ನಫ್ ವಂದಿಸಿದರು.







