ಪಳ್ಳಿ ಜಯರಾಮ ಶೆಟ್ಟಿ ಸ್ಮಾರಕ ಬಿ ಡಿವಿಷನ್ ಫುಟ್ಬಾಲ್ ಲೀಗ್ ಪಂದ್ಯಾಟ: ಮರ್ಚಂಟ್ಸ್ ಫುಟ್ಬಾಲ್ ತಂಡಕ್ಕೆ ಪ್ರಶಸ್ತಿ

ಮಂಗಳೂರು, ಮೇ 14: ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಎಕ್ಕೂರಿನ ಫಿಶರೀಸ್ ಕಾಲೇಜು ಮೈದಾನದಲ್ಲಿ ನಡೆದ 2024-25ನೆ ಸಾಲಿನ ಬಿ ಡಿವಿಷನ್ ಲೀಗ್ ಪಂದ್ಯಾಟದಲ್ಲಿ ಮಂಗಳೂರಿನ ಮರ್ಚಂಟ್ಸ್ ಫುಟ್ಬಾಲ್ ತಂಡವು ಸೂಪರ್ ಲೀಗ್ ಹಂತದ ಪಂದ್ಯಾಟದಲ್ಲಿ ತಲಪಾಡಿಯ ಸಿಟಿಜನ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಂತ ಅಲೋಸಿಯಸ್ ಕಾಲೇಜು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಈ ಮೂಲಕ ಎರಡೂ ತಂಡವು ಮುಂದಿನ ವರ್ಷ ಎ ಡಿವಿಷನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಮರ್ಚಂಟ್ಸ್ ತಂಡವು ಹಲವು ವರ್ಷಗಳ ನಂತರ ಎ ಡಿವಿಷನ್‌ಗೆ ತೇರ್ಗಡೆಗೊಂಡಿತು.
*ಅಹ್ಮದ್ ಮಾಸ್ಟರ್ ಸ್ಮಾರಕ ಎ ಡಿವಿಷನ್ ಲೀಗ್ ಪಂದ್ಯಾವಳಿ :ಯೆನೆಪೋಯ ತಂಡಕ್ಕೆ ಪ್ರಶಸ್ತಿ
2024-25ನೆ ಸಾಲಿನ ಎ ಡಿವಿಷನ್ ಲೀಗ್ ಪಂದ್ಯಾಟದಲ್ಲಿ ದೇರಳಕಟ್ಟೆಯ ಯೆನೆಪೋಯ ಯುನಿವರ್ಸಿಟಿ ತಂಡವು ಮತ್ತೊಮ್ಮೆ ಲೀಗ್ ಪ್ರಶಸ್ತಿಯನ್ನು ಪಡೆದುಕೊಂಡಿತು. ತಾನು ಆಡಿದ ಸೂಪರ್‌ಲೀಗಿನ ಕೊನೆಯ ಪಂದ್ಯಾಟದಲ್ಲಿ ಎ.ಎಫ್.ಸಿ ಉಳ್ಳಾಲ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಪಡೆದು ಕೊಂಡಿತು. ಎ.ಎಫ್.ಸಿ ಉಳ್ಳಾಲ ತಂಡವು ತನ್ನ ಕೊನೆಯ ಲೀಗ್ ಪಂದ್ಯಾಟದಲ್ಲಿ ಯುನೈಟೆಡ್ ಎಫ್ ಸಿ.ಪಜೀರ್ ತಂಡವನ್ನು 1-0 ಗೋಲಿಂದ ಸೋಲಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿತು.
ನೆಹರೂ ಮೈದಾನದಲ್ಲಿ ಟರ್ಫ್ ಅಳವಡಿಸುತ್ತಿರುವ ಕಾರಣ ಎಕ್ಕೂರ್ ಫಿಶರೀಸ್ ಮೈದಾನದಲ್ಲಿ ನಡೆದ ಈ ಪಂದ್ಯಾಟದಲ್ಲಿ ಹಾಗೂ ಬಿ ಡಿವಿಷನ್ ನಲ್ಲಿ ತಲಾ 9 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಕಾರ್ಯಕ್ರಮದಲ್ಲಿ ಫಿಶರೀಸ್ ಕಾಲೇಜಿನ ಡೀನ್ ಪ್ರೊ. ಆಂಜನೇಯಪ್ಪ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಮನೋಜ್ ಕುಮಾರ್ ಪ್ರಶಸ್ತಿ ವಿತರಿಸಿದರು. ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹುಸೇನ್ ಬೋಳಾರ್ ಸ್ವಾಗತಿಸಿದರು. ರಾಜ್ಯ ಫುಟ್ಬಾಲ್ ಸಂಸ್ಥೆ ಸದಸ್ಯ ವಿಜಯ ಸುವರ್ಣ, ಫುಟ್ಬಾಲ್ ಅಸೋಸಿಯೇಶನ್ ಉಪಾಧ್ಯಕ್ಷ ಬಿ.ಬಿ. ಥೋಮಸ್, ಸದಸ್ಯರಾದ ಅಬ್ದುಲ್ ಲತೀಫ್, ಅನಿಲ್ ಪಿ.ವಿ, ಸುಜಿತ್ ಕೆ.ವಿ, ಆರೀಫ್ ಉಚ್ಚಿಲ, ಯು.ಆರ್. ಅಕಾಡಮಿಯ ಉಮೇಶ್ ಉಚ್ಚಿಲ, ಮಂಗಳೂರು ಸ್ಪೋರ್ಟಿಂಗ್ ತಂಡದ ಅಧ್ಯಕ್ಷ ಹಾಗೂ ಅಹ್ಮದ್ ಮಾಸ್ಟರ್‌ರ ಪುತ್ರ ಫಯಾಝ್ ಅಹ್ಮದ್, ಮರ್ಚಂಟ್ಸ್ ತಂಡದ ಅಧ್ಯಕ್ಷ ಹಾಗೂ ಮಾಜಿ ಫುಟ್ಬಾಲ್ ಆಟಗಾರ ನೋಬರ್ಟ್ ಸಲ್ದಾನ, ಪಂದ್ಯಾಟದ ನಿರ್ವಹಣಾ ತಂಡದ ಸದಸ್ಯರಾದ ನಾಸಿರ್ ಬೋಳಾರ್, ಅಶ್ರಫ್ ಕೆ.ಎಂ., ಹಕೀಂ, ಅಶ್ಫಾಕ್, ಅನ್ಸಾರ್, ಫೋರ್ತ್ ಆಫೀಶಿಯಲ್ ಆಗಿ ಕಾರ್ಯನಿರ್ವಹಿಸಿದ ಅನಸ್, ಟಿ.ಕೆ. ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.







