ಬಂಟ್ವಾಳ ತಾಲೂಕು ಖಜಾನೆಗೆ ಲೋಕಾಯುಕ್ತ ದಾಳಿ: ಮುಖ್ಯ ಲೆಕ್ಕಿಗ ಭಾಸ್ಕರ್ ಸೇರಿ ಇಬ್ಬರ ಬಂಧನ

ಮಂಗಳೂರು : ಗ್ರಾಪಂವೊಂದರ ಮಾಜಿ ಕಾರ್ಯದರ್ಶಿಯಿಂದ ಲಂಚ ಸ್ವೀಕರಿಸುತ್ತಿರುವಾಗಲೇ ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಸಿಬ್ಬಂದಿಗಳನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ ಘಟನೆ ಬುಧವಾರ ನಡೆದಿದೆ.
ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಮತ್ತು ಖಜಾನೆಯ ಎಫ್‌ಡಿಎ ಬಸವಗೌಡ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಆರೋಪಿಗಳಾಗಿದ್ದಾರೆ.
ಬಂಟ್ವಾಳ ತಾಲೂಕಿನ ಗ್ರಾಪಂವೊಂದರಲ್ಲಿ ಕಾರ್ಯದರ್ಶಿಯಾಗಿದ್ದ ದೂರುದಾರರು 2023ರ ಅಕ್ಟೋಬರ್‌ನಲ್ಲಿ ವಯೋನಿವೃತ್ತಿ ಹೊಂದಿದ್ದರು. 2024ರ ಜೂನ್‌ನಲ್ಲಿ ಅವರ ಪತಿ ನಿಧನರಾಗಿದ್ದರು. ಗಂಡನ ಮರಣ ಉಪದಾನದ ಬಗ್ಗೆ ದೂರುದಾರರು ಖಜಾನೆಯ ಕಚೇರಿಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿರಲಿಲ್ಲ ಎನ್ನಲಾಗಿದೆ.
ಈ ವೇಳೆ ಖಜಾನೆಯ ಮುಖ್ಯಲೆಕ್ಕಿಗ ಭಾಸ್ಕರ್ 5,000 ರೂ,. ಮತ್ತು ಖಜಾನೆಯ ಎಫ್‌ಡಿಎ ಬಸವಗೌಡ ಬಿ.ಎನ್. 5,000 ರೂ.- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬುಧವಾರ ಈ ಇಬ್ಬರು ಆರೋಪಿಗಳು ತಲಾ ಐದು ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ. ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಲೋಕಾಯುಕ್ತ ಪ್ರಭಾರ ಅಧೀಕ್ಷಕ ಕುಮಾರಚಂದ್ರರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ ಕೆ.ಎನ್. ಮತ್ತಿತರರು ಪಾಲ್ಗೊಂಡಿದ್ದರು.