ನಂದಳಿಕೆ ಬಾಲಚಂದ್ರ ರಾವ್ ನಿಧನ

ಮಂಗಳೂರು: ಕರ್ನಾಟಕ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದ ನಂದಳಿಕೆ ಬಾಲಚಂದ್ರ ರಾವ್ (72) ಹೃದಯಾಘಾತದಿಂದ ಬುಧವಾರ ಮಂಗಳೂರಿನಲ್ಲಿ ನಿಧನರಾದರು.
ಅವರು ಪತ್ನಿ, ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.
ಬಾಲಚಂದ್ರ ರಾವ್ ಕವಿ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಲಿ ಸ್ಥಾಪನೆ ಮಾಡಿ ಅದರ ಮೂಲಕ ಕವಿಯನ್ನು ನೆನಪಿಸುವ ನೂರಾರು ಕಾರ್ಯಕ್ರಮಗಳನ್ನು, ಕೆಲಸಗಳನ್ನು ಮಾಡಿದ್ದರು.
ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟ ಗಳು, ಪ್ರತೀ ವರ್ಷ ಕವಿ ಮುದ್ದಣ ದಿನಾಚರಣೆ, ಸ್ಟಾಂಪ್ ಬಿಡುಗಡೆ, ಮುದ್ದಣನ ಹೆಸರಲ್ಲಿ ನೂರಾರು ಸಾಹಿತ್ಯಿಕ ಕಾರ್ಯಕ್ರಮಗಳು, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ, ಮಂಗಳೂರು ವಿವಿಯಲ್ಲಿ ಕವಿಯ ನೆನಪಿನ ಅಧ್ಯಯನ ಪೀಠಕ್ಕಾಗಿ ಶ್ರಮಿಸಿದ್ದರು.
ಬಾಲಚಂದ್ರ ರಾವ್ ಕರ್ನಾಟಕ ಬ್ಯಾಂಕ್‌ನಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ನಂದಳಿಕೆ ಬಾಲಚಂದ್ರ ರಾವ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಮೇ 15ರಂದು ಗುರುವಾರ ಬೆಳಗ್ಗೆ ಗಂಟೆ 6 ರಿಂದ 9ರ ವರೆಗೆ ಬಿಜೈನಲ್ಲಿರುವ ಬಾಲಚಂದ್ರ ರಾಯರ ಸ್ವಗೃಹದಲ್ಲಿ ಇರಿಸಲಾಗುವುದು. ಬಳಿಕ ಪಾರ್ಥಿವ ಶರೀರವನ್ನು ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿಗೆ ಕೊಂಡೊಯ್ಯಲಾಗುವುದು. ಅಲ್ಲಿ ಅಂತಿಮ ದರ್ಶನ ವ್ಯವಸ್ಥೆಯಾಗಿದೆ. ಬಳಿಕ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ನಂದಳಿಕೆ ಬಾಲಚಂದ್ರ ರಾವ್ ನಿಧನಕ್ಕೆ ಕಲ್ಕೂರ ಸಂತಾಪ
ನಂದಳಿಕೆ ಬಾಲಚಂದ್ರ ರಾವ್ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಂದಳಿಕೆಯ ಕವಿ ಮುದ್ದಣನ ಸಾಹಿತ್ಯ ವಿಶೇಷತೆಯನ್ನು ಜಾಹೀರುಪಡಿಸುವಲ್ಲಿ ದಿ.ನಂದಳಿಕೆ ಬಾಲ ಚಂದ್ರ ರಾಯರ ಶ್ರಮ ಶ್ಲಾಘನೀಯವಾದುದು ,ಸಾಹಿತ್ಯ ಸಂಘಟನೆಯಲ್ಲೂ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಅವರ ಸೇವೆ ನಿಜಕ್ಕೂ ಅನನ್ಯವಾಗಿತ್ತು.
ಓರ್ವ ಸಂಘಟಕರಾಗಿ, ಸಾಹಿತ್ಯ ಸಾಂಸ್ಕೃತಿಕ ಪರಿಚಾರಕರಾಗಿ, ಸ್ನೇಹಜೀವಿಯಾಗಿದ್ದ ಬಾಲಚಂದ್ರ ರಾಯರ ಅಗಲಿಕೆ ನೋವನ್ನುಂಟು ಮಾಡಿದೆ ಎಂದು ಕಲ್ಕೂರ ಹೇಳಿದ್ದಾರೆ.
ಬಾಲಚಂದ್ರ ರಾಯರಿಗೆ ಕಲ್ಕೂರ ಪ್ರತಿಷ್ಠಾನದಿಂದ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ಕಲ್ಕೂರ ತಿಳಿಸಿದ್ದಾರೆ.