ಶ್ರಮ, ಛಲದಿಂದ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ: ಸ್ಪೀಕರ್ ಯು.ಟಿ. ಖಾದರ್
ಏಸ್ ಫೌಂಡೇಶನ್‌ನಿಂದ ಯುಪಿಎಸ್‌ಸಿ ಸಾಧಕರಿಬ್ಬರಿಗೆ ಅಭಿನಂದನೆ ಕಾರ್ಯಕ್ರಮ

ಮಂಗಳೂರು : ಶ್ರಮ ಮತ್ತು ಛಲದಿಂದ ಯಶಸ್ಸು ಸಾಧ್ಯ ಎಂದು ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್ ಹೇಳಿದ್ದಾರೆ.
ಯುಪಿಎಸ್‌ಸಿ - ನಾಗರಿಕ ಸೇವಾ ಪರೀಕ್ಷೆಯಲ್ಲಿ 345 ರ‍್ಯಾಂಕ್ ಗಳಿಸಿದ ಶೌಕತ್ ಅಝೀಮ್ ಮತ್ತು 588ನೇ ರ‍್ಯಾಂಕ್ ಗಳಿಸಿರುವ ಅಬು ಸಾಲಿಯಾ ಖಾನ್ ಅವರಿಗೆ ಏಸ್ ಫೌಂಡೇಶನ್ ಆಶ್ರಯದಲ್ಲಿ ಬುಧವಾರ ನಗರದ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಹೆತ್ತವರ ಶ್ರಮ, ಸಮುದಾಯ ಪ್ರೋತ್ಸಾಹ ಇದ್ದರೆ ಆ ಸಮದಾಯದ ಜನರು ಮುಂದುವರಿಯಲು ಸಾಧ್ಯ ಎನ್ನುವುದಕ್ಕೆ ಇಬ್ಬರು ಉದಾರಣೆಯಾಗಿದ್ದಾರೆ. ಇವರನ್ನು ರೂಪಿಸಿದ ಏಸ್ ಫೌಂಡೇಶನ್ ಗೂ ಅಭಿನಂದನೆಗಳು ಎಂದರು.
ಇಬ್ಬರು ಅಧಿಕಾರಿಗಳ ಸಾಧನೆಯು ಸಮುದಾಯಕ್ಕೆ ಹೆಮ್ಮೆ ತಂದಿದೆ. ಉತ್ತಮ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಮತ್ತು ಹಿಂದಿನ ಅಧಿಕಾರಿಗಳು ಹಾಕಿಕೊಟ್ಟ ಪರಂಪರೆಯನ್ನು ಮುಂದುವರಿಸಬೇಕು ಎಂದು ಕಿವಿ ಮಾತು ನುಡಿದರು.
ಬೆಂಗಳೂರು ಬಿಎಂಟಿಸಿ (ಭದ್ರತೆ ಮತ್ತು ವಿಜಿಲೆನ್ಸ್) ನಿರ್ದೇಶಕ ಅಬ್ದುಲ್ ಅಹದ್ ಮಾತನಾಡಿ, ಈ ಇಬ್ಬರು ಮಾಡಿರುವ ಸಾಧನೆ ಅಮೋಘವಾದುದು. ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಾಗ ಅಪಾರ ಧೈರ್ಯ, ಛಲ ಹಾಗೂ ತಾಳ್ಮೆ ಅಗತ್ಯ ಎಂದು ಹೇಳಿದರು.
ಇವರಿಬ್ಬರ ಸಾಧನೆಯನ್ನು ಪ್ರಶಂಸಿಸುವ ವಾಗ ನಾವು ಯುಪಿಎಸ್‌ಸಿಯಂತಹ ಶ್ರೇಷ್ಠ ಸಂಸ್ಥೆಯನ್ನೂ, ಈ ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನೂ ನೆನೆಯಬೇಕು. ಏಸ್ ಫೌಂಡೇಶನ್‌ನಂತಹ ಸಂಸ್ಥೆಗಳಿಗೆ ಎಲ್ಲರೂ ಪ್ರೋತ್ಸಾಹ ಹಾಗೂ ಸಹಕಾರ ನೀಡಬೇಕು ಎಂದು ಹೇಳಿದರು.
ಯೆನೆಪೊಯ ಪರಿಗಣಿತ ವಿವಿ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮುಖ್ಯ ಅತಿಥಿಯಾಗಿದ್ದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್, ಇಂಡಸ್ಟ್ರಿ ಅಧ್ಯಕ್ಷ ಎಸ್. ಎಂ.ರಶೀದ್ ಹಾಜಿ, ಜುಬೈಲ್‌ನ ಎಕ್ಸ್‌ಪರ್ಟೈಸ್ ಕಂಪೆನಿ ಉಪಾಧ್ಯಕ್ಷ ಶೇಖ್ ಕರ್ನಿರೆ, ಉದ್ಯಮಿಗಳಾದ ಸಿಎ ಅಬ್ದುಲ್ಲ ಮಾದುಮೂಲೆ, ಇಬ್ರಾಹೀಂ ಗಡಿಯಾರ್ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಏಸ್ ಫೌಂಡೇಶನ್‌ನ ಗೌರವಾಧ್ಯಕ್ಷ ಸಾದುದ್ದೀನ್ ಎಂ. ಸಾಲಿಹ್ ಅಧ್ಯಕ್ಷತೆ ವಹಿಸಿದ್ದರು.
ಏಸ್ ಫೌಂಡೇಶನ್ ನಿರ್ದೇಶಕ ನಝೀರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಇಮ್ತಿಯಾಝ್ ಖತೀಬ್ ಸ್ವಾಗತಿಸಿದರು. ಬದ್ರುದ್ದೀನ್ ಕಿರಾಅತ್ ಪಠಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.