ಪರಿಶಿಷ್ಟರ ಜಮೀನು ಅತಿಕ್ರಮಣ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಏಕಿಲ್ಲ ?
ಮುಖ್ಯಮಂತ್ರಿಗೆ ಪ.ಜಾತಿ ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಬಹಿರಂಗ ಪತ್ರ

ಮಂಗಳೂರು: ಜಿಲ್ಲಾಡಳಿತ, ಮೀಸಲು ಜಮೀನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು, ದಾಖಲಿಸಿ, ಆ ಜಮೀನುಗಳನ್ನು ನಿಯಮಾನುಸಾರ ಸರ್ಕಾರದ ವಶಕ್ಕೆ ಪಡೆದು, ಪರಿಶಿಷ್ಟ ಸಮುದಾಯಗಳ ನಿವೇಶನ ರಹಿತರಿಗೆ ಮಂಜೂರು ಮಾಡಲು ಕ್ರಮ ಕೈಗೊಂಡಿಲ್ಲ. ಬದಲಾಗಿ ಜಾಗ ಅತಿಕ್ರಮಣ ನಡೆಸಿರುವ ಬಲಾಢ್ಯರ ಎದುರು ಜಿಲ್ಲಾಡಳಿತ ಮಂಡಿಯೂರಿದೆ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಆರೋಪಿಸಿದೆ.
ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಸಮುದಾಯಗಳಿಗೆ ಮೀಸಲಾಗಿಟ್ಟ ಜಮೀನನ್ನು ಕಾನೂನು ಬಾಹಿರವಾಗಿ ಯಾರೇ ಅತಿಕ್ರಮಣ ಮಾಡುವುದು, ಅನುಭೋಗ ಮಾಡುವುದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ ಪ್ರಕಾರ ಗಂಭೀರ ಸ್ವರೂಪದ ಕ್ರಿಮಿನಲ್ ಅಪರಾಧ ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣ ಉದ್ಘಾಟಿಸಲು ಮೇ 16 ರಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿಸಿ ಮನ್ನಾ ಭೂಮಿ, ಒಳ ಮೀಸಲಾತಿ ಮತ್ತಿತರ ವಿಷಯಗಳಲ್ಲಿ ಪರಿಶಿಷ್ಟರಿಗೆ ಉಂಟಾಗುತ್ತಿರುವ ಅನ್ಯಾಯ ಕುರಿತು ಪತ್ರ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಅದರ ಪ್ರತಿಯನ್ನು ಬಿಡುಗಡೆಗೊಳಿಸಿದರು.
ದ ಕ ಜಿಲ್ಲೆಯಲ್ಲಿರುವ 8510 ಎಕರೆ ಡಿ ಸಿ ಮನ್ನಾ ಜಮೀನಿನಲ್ಲಿ 7366 ಎಕರೆ ಜಮೀನನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗಿದೆ. ಉಳಿದಿರುವ 1144 ಎಕರೆಯಲ್ಲಿ 977 ಎಕರೆ ಅತಿಕ್ರಮವಾಗಿದೆ. 190 ಎಕ್ರೆ ಹಂಚಿಕೆಗೆ ಲಭ್ಯವಿದೆ. ಈ ಸಂಬಂಧ ಹಲವು ದೂರುಗಳನ್ನು ನೀಡಿದೆ. ಪ್ರತಿಭಟನೆಗಳನ್ನೂ ನಡೆಸಿದೆ. ಆದರೆ ಇಲ್ಲಿಯ ತನಕ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಲೋಲಾಕ್ಷ ಆರೋಪಿಸಿದರು.
ದೇಶದಲ್ಲಿ ಕ್ರೈಸ್ತರು ಪರಿಶಿಷ್ಟ ಜಾತಿಯ ಸ್ಥಾನಮಾನಕ್ಕೆ ಅರ್ಹರಲ್ಲ. ಸಂವಿಧಾನದ ವಿಧಿ 341(1) ರಡಿಯಲ್ಲಿ ರಾಷ್ಟ್ರಪತಿಗಳು ಹೊರಡಿಸಿರುವ ಅಧಿಸೂಚನೆ, ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ಮತ್ತು ನಂತರದ ತಿದ್ದುಪಡಿಗಳು, ಕ್ರೈಸ್ತರು ಪರಿಶಿಷ್ಟ ಜಾತಿಗಳ ಸ್ಥಾನಮಾನ ಪಡೆಯುವುದನ್ನು ನಿಷೇಧಿಸಿದೆ. ಆದರೆ ಇದೆಲ್ಲವೂ ಗೊತ್ತಿದ್ದರೂ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿಗಾಗಿ ರಚಿಸ ಲಾದ ವಿಚಾರಣಾ ಆಯೋಗದ ಮೂಲಕವೇ ಕ್ರೈಸ್ತರು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆಯಲು ಹೆಣೆದ ಷಡ್ಯಂತ್ರವನ್ನು ಬಯಲು ಗೊಳಿಸಿ, ಅದರ ವಿರುದ್ಧ ನಾವು ಲಿಖಿತ ದೂರು ನೀಡಿ 10 ದಿನಗಳೇ ಕಳೆದಿವೆ. ಸರ್ಕಾರ ಮೌನವಾಗಿರುವುದು ಮತ್ತು ಒಳಮೀಸಲಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರ ಧರ್ಮ ದಾಖಲು ಮಾಡಲು ಕಲಂ ಸೇರ್ಪಡೆ ಮಾಡಬೇಕು ಎಂಬ ನಮ್ಮ ಅಗ್ರಹಕ್ಕೆ ಮತ್ತು ರಾಜ್ಯದ ಭೌದ್ಧ ಸಂಘ - ಸಂಸ್ಥೆಗಳ ಕೋರಿಕೆಗೆ ತಮ್ಮ ಸರ್ಕಾರ ಜಾಣ ಕಿವಿಡು ಧೋರಣೆ ತಾಳಿರುವುದು ಏಕೆ ಎಂದುಪ್ರಶ್ನಿಸಿದರು.
ಆದಿ ದ್ರಾವಿಡ ಜಾತಿಯೇ ಮಾಯ !
1950 ರ ರಾಷ್ಟ್ರಪತಿಗಳ ಅಧಿಸೂಚನೆಯಲ್ಲೇ ಪರಿಶಿಷ್ಟ ಜಾತಿ ಎಂದು ಪರಿಗಣಿತವಾದ ಆದಿ ದ್ರಾವಿಡ ಜಾತಿಯನ್ನು ಜಾತಿಗಳ ಗುಂಪು ಎಂದು ತಮ್ಮ ಸರ್ಕಾರ ಮತ್ತು ತಾವು ರಚಿಸಿರುವ ಆಯೋಗ ಹೇಳು ತ್ತಿದೆ. ರಾಷ್ಟ್ರಪತಿ ಹೊರಡಿಸಿರುವ ಅಧಿಸೂಚನೆ ವಿಕೃತಗೊಳಿಸುವ/ ಬದಲಿಸುವ ಅಧಿಕಾರ ನಿಮಗೆ ಕೊಟ್ಟವರಾರು ಎಂದು ಈ ನಾಡಿನ ಜನರಿಗೆ ತಿಳಿಸಬೇಕು ಎಂದು ಅವರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರು, ಮುಖಂಡರಾದ ಅನಿಲ್ ಕಂಕನಾಡಿ, ಲಕ್ಷ್ಮಣ ಕಾಂಚನ್ ಉಪಸ್ಥಿತರಿದ್ದರು.







