ಉದ್ಯೋಗ ಆಮಿಷವೊಡ್ಡಿ ವಂಚನೆ ಆರೋಪ: ಪ್ರಕರಣ ದಾಖಲು

ಮಂಗಳೂರು: ಸಿಸಿಟಿವಿ ಕಂಟ್ರೋಲ್ ರೂಂನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿಕೊಂಡು 2.10 ಲಕ್ಷ ರೂ. ಪಡೆದು ಬಳಿಕ ವಂಚನೆ ಮಾಡಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಸಿಸಿಟಿವಿ ಕಂಟ್ರೋಲ್ ರೂಂನಲ್ಲಿ ಸಿಸಿ ಟಿವಿ ಆಪರೇಟರ್ ಉದ್ಯೋಗವಿದೆ. ಉದ್ಯೋಗಿಗಳು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದವರ ಫೋಟೋ ತೆಗೆದು ಅವರಿಗೆ ನೋಟಿಸ್ ಜಾರಿ ಮಾಡುವ ಕೆಲಸ ಮಾಡಬೇಕು. ಒಟ್ಟು 17 ಹುದ್ದೆ ಇದೆ. ತಿಂಗಳಿಗೆ 38,500 ರೂ. ಸಂಬಳ ಕೊಡುವುದಾಗಿ ಬೆಂಗರೆ ನಿವಾಸಿ ಅಹಮ್ಮದ್ ಹುಸೈನ್ ಎಂಬಾತ ನಂಬಿಸಿದ್ದ ಎನ್ನಲಾಗಿದ್ದು, ಅದರಂತೆ ತಾವು ಅದಲ್ಲದೆ ಉದ್ಯೊಗಕ್ಕೆ ಸೇರಲು 1 ಲಕ್ಷ ರೂ. ಡೆಪಾಸಿಟ್ ಮತ್ತು ದಾಖಲಾತಿ ಪರಿಶೀಲನೆಗೆ 5 ಸಾವಿರ ರೂ. ಸೇರಿ ಒಟ್ಟು 1.05 ಲಕ್ಷ ರೂ. ನೀಡಬೇಕು ತಿಳಿಸಿದ್ದ. ಆತನ ಮಾತನ್ನು ನಂಬಿದ ನಾವು ತಲಾ 1.05 ಲಕ್ಷ ರೂ. ಪಾವತಿ ಮಾಡಿದ್ದೆವು. ಆ ಬಳಿಕ ಆರೋಪಿಯು ದಿನಕ್ಕೊಂದು ಕಾರಣ ಹೇಳಿ ಉದ್ಯೋಗ ಮಾಡಿಸಿಕೊಡದೆ, ಹಣವನ್ನೂ ವಾಪಸ್ ನೀಡದೆ ಮೋಸ ಮಾಡಿದ್ದಾನೆ ಎಂದು ಪಾಂಡೇಶ್ವರ ಬಳಿ ಜಿಮ್ ನಡೆಸುತ್ತಿರುವ ನಿಸಾರ್ ಅಹಮ್ಮದ್ ಮತ್ತು ಅಬ್ದುಲ್ ಶುಕೂರ್ ಎಂಬವರು ಆರೋಪಿಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.





