ಮಂಗಳೂರು: ದಾರುಲ್ ಇಲ್ಮ್ ಮದ್ರಸದ ನವೀಕೃತ ಕಟ್ಟಡ ಉದ್ಘಾಟನೆ

ಮಂಗಳೂರು, ಮೇ 17: ನಗರದ ಫಳ್ನೀರ್‌ನ ಲುಲು ಸೆಂಟರ್‌ನಲ್ಲಿರುವ ದಾರುಲ್ ಇಲ್ಮ್ ಮದ್ರಸದ ನವೀಕೃತ ಕಟ್ಟಡವನ್ನು ಶನಿವಾರ ಕುದ್ರೋಳಿ ಜಾಮಿಯ ಮಸೀದಿ ಖಾಝಿ ಮುಫ್ತಿ ಮುತಾಹರ್ ಹುಸೈನ್ ಕಾಸಿಮಿ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಮುಸ್ಲಿಮರ ಮೇಲೆ ನಾನಾ ರೀತಿಯ ಅನ್ಯಾಯ ನಡೆಯುತ್ತಿದೆ. ಮನುಷ್ಯತ್ವ ಇಲ್ಲದವರಿಂದ ಮಾತ್ರ ಇಂತಹ ದೌರ್ಜನ್ಯ ಎಸಗಲು ಸಾಧ್ಯ. ಇದರಿಂದ ನಾವ್ಯಾರೂ ವಿಚಲಿತರಾಗಬಾರದು. ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಾವು ಅಪಾರ ಕಾಳಜಿ ವಹಿಸಬೇಕಾಗಿದೆ. ಅವರಿಗಾಗಿ ಹೆಚ್ಚು ಸಮಯ ವ್ಯಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮದ್ರಸದ ಮಹತ್ವವನ್ನು ಅರಿತು ಮುನ್ನಡೆಯಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ʼವಾರ್ತಾಭಾರತಿʼಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಶಿಕ್ಷಣದಲ್ಲಿ ಧಾರ್ಮಿಕ, ಲೌಖಿಕ ಅಂತೇನೂ ಇಲ್ಲ. ಅದನ್ನು ನಾವು ವಿಂಗಡಿಸಲೂ ಬಾರದು. ಮುಸ್ಲಿಮರು ಆಡಳಿತಗಾರರಾಗಿದ್ದ ವೇಳೆ ಅಂತಹ ವಿಂಗಡನೆಯೂ ಇರಲಿಲ್ಲ. ಗುಲಾಮರಾದ ಬಳಿಕ ಆ ವಿಂಗಡನೆ ಚಾಲ್ತಿಗೆ ಬಂದಿದೆ. ನಮಗೆ ದುನಿಯಾ ಯಾವತ್ತೂ ಅಪಥ್ಯವಲ್ಲ. ನಾವು ದಿನವಿಡೀ ಮಸೀದಿಯಲ್ಲೇ ಕಾಲ ಕಳೆಯಬೇಕು ಎಂದು ಧರ್ಮ ಕೂಡ ಹೇಳಲಿಲ್ಲ. ಪ್ರಾರ್ಥನೆಯ ಬಳಿಕ ವ್ಯಾಪಾರ, ಉದ್ಯೋಗ ಇತ್ಯಾದಿ ಜವಾಬ್ದಾರಿಯನ್ನು ನಿಭಾಯಿಸಲು ಹೇಳಿದೆ. ಸಂಶೋಧನೆ, ಗ್ರಂಥಾಲಯ, ವಿಶ್ವವಿದ್ಯಾನಿಲಯ, ಗಣಿತ, ವಿಜ್ಞಾನ ಇತ್ಯಾದಿಗೆ ಮುಸ್ಲಿಮರ ಕೊಡುಗೆ ಅಪಾರವಿದೆ ಎಂಬುದನ್ನು ನಾವು ಮರೆಯಬಾರದು. ಇನ್ನಾದರು ಮತ್ತೆ ಅದರತ್ತ ನಾವು ಹೆಜ್ಜೆ ಹಾಕಬೇಕಿದೆ ಎಂದರು.
ಯುನಿಟಿ ಹೆಲ್ತ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಡಾ.ಸಿ.ಪಿ. ಹಬೀಬ್ ರಹ್ಮಾನ್ ಮಾತನಾಡಿ ಜಗತ್ತು ಬದಲಾಗುತ್ತಿದೆ. ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಆದರೆ ಮುಸ್ಲಿಮರು ಅದರಿಂದ ವಿಮುಖರಾಗುತ್ತಿದ್ದಾರೆ. ಜಗತ್ತಿನ ಶೇ.80ರಷ್ಟು ಮುಸ್ಲಿಮರಿಗೆ ಇನ್ನೂ ಅರಬಿಕ್ ಭಾಷೆ ತಿಳಿದಿಲ್ಲ. ಹೀಗಾಗಬಾರದು. ನಾವು ಅರಬಿಕ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಹೊಂದಬೇಕಿದೆ ಎಂದರು.
ಭಾರತೀಯ ಕೃಷಿಕ ಸಮಾಜದ ದ.ಕ.ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ಮಾತನಾಡಿದರು. ಉದ್ಯಮಿ ರಿಯಾಝ್ ಅಬ್ದುಲ್ ಖಾದರ್ ಬಾವ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದಾರುಲ್ ಇಲ್ಮ್ ಸ್ಥಾಪಕ ರಫೀಉದ್ದೀನ್ ಕುದ್ರೋಳಿ, ದಾರುಲ್ ಇಲ್ಮ್ ಸ್ಥಾಪನೆಗೊಂಡು 20 ವರ್ಷಗಳಾಗಿವೆ. ಹಳೆಯ ಕಟ್ಟಡವನ್ನು ನವೀಕರಿಸಲಾಗಿದೆ. ಇಂದು ಮದ್ರಸಗಳ ವಿರುದ್ಧ ಅನೇಕ ರೀತಿಯ ಆರೋಪಗಳು ಇವೆ. ಇದಕ್ಕೆ ಉತ್ತರ ಎಂಬಂತೆ ದಾರುಲ್ ಇಲ್ಮ್ ಕಾರ್ಯಾಚರಿಸುತ್ತಿವೆ. ಇಸ್ಲಾಮಿನ ಬಗ್ಗೆ, ಪ್ರವಾದಿಯ ಬಗ್ಗೆ ಅಪಪ್ರಚಾರ ನಡೆದಾಗ ಅದಕ್ಕೆ ಸ್ಪಷ್ಟನೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ದಾರುಲ್ ಇಲ್ಮ್ ಕೇವಲ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರವಲ್ಲ. ಸಮುದಾಯದ ಬಗ್ಗೆ ನಮ್ಮ ಜವಾಬ್ದಾರಿ ಏನು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡುವುದ ರೊಂದಿಗೆ ಕಲುಷಿತ ವಾತಾವರಣವನ್ನು ತಿಳಿಗೊಳಿಸುವ ಹೊಣೆಗಾರಿಕೆಯನ್ನೂ ಹೊಂದಿದೆ ಎಂದು ಹೇಳಿದರು.
ಮುಕ್ತಾರ್ ಕಿರಾಅತ್ ಪಠಿಸಿದರು. ಹುದೈಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.







