ಮಜಲು ತೋಟ: ಮಾದಕ ವ್ಯಸನ ವಿರುದ್ಧ ವಿಶೇಷ ಅಸೆಂಬ್ಲಿ, ಪ್ರತಿಜ್ಞಾ ಸ್ವೀಕಾರ, ಸಹಿ ಸಂಗ್ರಹ

ಉಳ್ಳಾಲ: ಮಾದಕ ವ್ಯಸನದ ವಿರುದ್ಧ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ ಮುನ್ನೂರು ಗ್ರಾಪಂ ವ್ಯಾಪ್ತಿಯ ಮಜಲುತೋಟ ನುಸ್ರತುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ವಿದ್ಯಾರ್ಥಿಗಳ ವಿಶೇಷ ಅಸೆಂಬ್ಲಿ, ಪ್ರತಿಜ್ಞಾ ಸ್ವೀಕಾರ ಮತ್ತು ಮಾದಕ ದ್ರವ್ಯಗಳ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಸಲ್ಲಿಸುವ ಮನವಿ ಪತ್ರಕ್ಕೆ ಸಹಿ ಸಂಗ್ರಹ ಕಾರ್ಯಕ್ರಮವು ನಡೆಯಿತು.
ಸ್ಥಳೀಯ ಖತೀಬ್ ಮುಹಮ್ಮದ್ ಆರಿಫ್ ಫೈಝಿ ಅಲ್ ಮಅಬರಿ ಜನಜಾಗೃತಿ ಸಂದೇಶ ನೀಡಿ, ಮಾದಕ ವಸ್ತುಗಳ ಬಳಕೆಯು ಮಾನವನ ಬದುಕಿನ ಅತಿ ದೊಡ್ಡ ದುರಂತವಾಗಿದೆ. ಇದಕ್ಕೆ ಬಲಿಯಾಗುವವರಲ್ಲಿ ಮಾನವೀಯತೆ ಇಲ್ಲವಾಗಿ ಮೃಗೀಯತೆ ಮೇಳೈಸುವುದರಿಂದ ಅವರು ಕುಟುಂಬಕ್ಕೂ ಸಮಾಜಕ್ಕೂ ದೇಶಕ್ಕೂ ಮಾರಕವಾಗಿ ಮಾರ್ಪಡುತ್ತಾರೆ. ಇಸ್ಲಾಮಿನಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಕಠಿಣವಾಗಿ ನಿಷೇಧಿಸಿದ್ದು, ಅದನ್ನು ಬಳಸುವವರು ಇಹದಲ್ಲೂ ಪರದಲ್ಲೂ ಪರಾಜಿತರಾಗುತ್ತಾರೆ. ಈ ವಸ್ತುಗಳ ಉಪಯೋಗ, ಸಾಗಾಟ ಮತ್ತು ಇವುಗಳಿಗೆ ಸಹಕಾರ ನೀಡುವುದು ದೇಶದ ಕಾನೂನಿಗೂ ವಿರುದ್ಧವಾಗಿದ್ದು ವಿದ್ಯಾರ್ಥಿಗಳು ಜಾಗರೂಕತೆ ಪಾಲಿಸಬೇಕು ಎಂದು ಕರೆ ನೀಡಿದರು.
ಅಬ್ದುಲ್ಲ ಮುಸ್ಲಿಯಾರ್ ಪೆರ್ನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಜಮಾಅತ್ ಅಧ್ಯಕ್ಷ ಹಸನಬ್ಬ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಿಝಾರ್, ಮಾಜಿ ಅಧ್ಯಕ್ಷ ಶರೀಫ್, ಸವಾದ್ ಹಾಗೂ ಇರ್ಷಾದ್ ತೋಟ ಉಪಸ್ಥಿತರಿದ್ದರು.