ನಕಲಿ ಜಾತಿ ಪ್ರಮಾಣಪತ್ರ ಅಮಾನ್ಯಗೊಳಿಸಲು ದ.ಕ. ಜಿಲ್ಲಾ ಕಾಂಗ್ರೆಸ್ ನ ಎಸ್.ಸಿ. ವಿಭಾಗ ಆಗ್ರಹ
ಮಂಗಳೂರು, ಮೇ 22: ಲಿಂಗಾಯಿತ ಸಮುದಾಯದ ಭಾಗವಾಗಿರುವ ಜಂಗಮ ಸಮುದಾಯವು ಬೇಡರ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಜಾತಿಗಳ ಮೀಸಲಾತಿಯ ದುರುಪಯೋಗಪಡಿಸುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ನ ಪರಿಶಿಷ್ಟ ಜಾತಿ ವಿಭಾಗ ಆರೋಪಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ಕೆಲ ಭ್ರಷ್ಟ ಅಧಿಕಾರಿಗಳ ಲಂಚದ ಆಸೆಯಿಂದ ಇಂತಹ ನಕಲಿ ಜಾತಿ ಪ್ರಮಾಣ ಪತ್ರಗಳು ಲಿಂಗಾಯತ ಸಮುದಾಯದ ಜಂಗಮರಿಗೆ ಲಭಿಸಿದೆ. ಈ ಬಗ್ಗೆ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗ ಮತ್ತು ಮುಖ್ಯಮಂತ್ರಿ ಕ್ರಮ ವಹಿಸಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಅಮಾನ್ಯಗೊಳಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಡಾ. ಬಿ.ಆರ್. ಅಂಬೇಡ್ಕರ್ ರಿಂದ ರಚಿತವಾದ ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೊಳಿಸಲು ಸಮೀಕ್ಷೆ ನಡೆಸುತ್ತಿದ್ದಾರೆ. ಇದು ಇನ್ನೂ ಅತಿ ತಳ ಮಟ್ಟದ ಪರಿಶಿಷ್ಟರನ್ನು ಹುಡುಕಿ ಅವರ ಕಲ್ಯಾಣಕ್ಕೆ ಪೂರಕವಾದ ಮೀಸಲಾತಿ ವರ್ಗೀಕರಿಸಲು ಒಳ ಮೀಸಲಾತಿ ಜಾರಿಗೆ ಕಾರ್ಯಾರಂಭಿಸಿರುವುದು ಶ್ಲಾಘನೀಯ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್, ಮುಖಂಡರಾದ ಟಿ. ಹೊನ್ನಯ್ಯ, ಕಿರಮ್ ಕುಮಾರ್, ಪ್ರೇಮ್ ಬಳ್ಳಾಲ್ಬಾಗ್ ಉಪಸ್ಥಿತರಿದ್ದರು.







