ಕುಪ್ಪೆಪದವು: ಕೃಷಿ ಜಾಗೃತಿ ಅಭಿಯಾನದಡಿ ಮಾಹಿತಿ ಕಾರ್ಯಕ್ರಮ

ಮಂಗಳೂರು, ಜೂ.1: ಹೊಸದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಕೃಷಿ ವಿಜ್ಞಾನ ಕೇಂದ್ರ ದ.ಕ. ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಜೂ.12ರವರೆಗೆ ನಡೆಯುವ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಇದರ ಅಂಗವಾಗಿ ಶನಿವಾರ ಕುಪ್ಪೆಪದವು ಗ್ರಾಪಂ ಸಭಾಂಗಣದಲ್ಲಿ ಪೂರ್ವ ಮುಂಗಾರು ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ. ರಮೇಶ್, ಕೇಂದ್ರೀಯ ಮೀನುಗಾರಿಕೆ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ರಾಜೇಶ್ ಕೆ ಎಂ., ಪಶು ವಿಜ್ಞಾನಿ ಡಾ. ಶಿವಕುಮಾರ್ ಆರ್, ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್. ಮಾಹಿತಿ ನೀಡಿದರು.
ರಾಜ್ಯ ರೈತ ಸಂಘದ ಮುಖಂಡ ಮನೋಹರ ಶೆಟ್ಟಿ ಮಾತನಾಡಿದರು. ಪ್ರಗತಿಪರ ಕೃಷಿಕರಾದ ಪ್ರತಿಭಾ ಹೆಗಡೆ, ದಯಾನಂದ ಶೆಟ್ಟಿ, ದಾಮೋದರ ಶೆಟ್ಟಿ, ಕುಪ್ಪೆಪದವು ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮದ ರೈತರು ಭಾಗವಹಿಸಿದ್ದರು.





