ಕೊರಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಧನವಿನಿಯೋಗ ಮಾಡಲಿ : ಮುನೀರ್ ಕಾಟಿಪಳ್ಳ

ಮಂಗಳೂರು, ಜೂ.1: ಕೇಂದ್ರ ಮತ್ತು ರಾಜ್ಯ ಸರಕಾರಗಳು ಆದಿವಾಸಿ ಕೊರಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಧನವಿನಿಯೋಗ ಮಾಡಬೇಕು ಎಂದು ಸಿಪಿಐಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ವಾಮಂಜೂರಿನ ಶ್ರೀ ಕೊರಗಜ್ಜ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ ಆದಿವಾಸಿ ಕೊರಗ ಸಮುದಾಯದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧುನಿಕವೆನ್ನುವ ಎಲ್ಲಾ ಜ್ಞಾನ ಪರಂಪರೆಯ ವಾರೀಸುದಾರರಾಗಿರುವ ಆದಿವಾಸಿ ಕೊರಗ ಸಮುದಾ ಯವು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಣಾಮವಾಗಿ ಎಲ್ಲ ರೀತಿಯ ಶೋಷಣೆಗೆ ಒಳಗಾಗಿ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಸಮುದಾಯವಾಗಿದೆ ಎಂದರು.
ಉಭಯ ಜಿಲ್ಲೆಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ಇರುವ ಪ್ರಖ್ಯಾತ ಕೊರಗಜ್ಜ ಆರಾಧನ ಗುಡಿಗಳ ಆದಾಯದಲ್ಲಿ ವಾರ್ಷಿಕವಾಗಿ ಕನಿಷ್ಟ ಹತ್ತು ಶೇಕಡಾದಷ್ಟು ಆದಾಯವನ್ನು ಕೊರಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಆವಶ್ಯಕತೆ ಇದೆ ಎಂದು ಹೇಳಿದರು.
ಮುಖ್ಯ ಅಥಿತಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿಯವರು ಮಾತನಾಡುತ್ತಾ ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾಗಿರುವ ಆದಿವಾಸಿ ಕೊರಗ ಸಮುದಾಯದ ವಿಮೋಚನೆಯ ಮೊದಲ ಹಂತವೇ ಶಿಕ್ಷಣವೇ ಆಗಿದ್ದು ,ಇದಕ್ಕಾಗಿ ಸರಕಾರ ಮತ್ತು ಸಮಾಜ ಅರ್ಪಣಾ ಮನೋಭಾವದಿಂದ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಅಧ್ಯಕ್ಷ ಕರಿಯ ಕೆ ವಹಿಸಿದ್ದರು.
ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ನ ಅಧ್ಯಕ್ಷ ವಿ.ಲಕ್ಷ್ಮಣ್ ದಿಕ್ಸೂಚಿ ಭಾಷಣ ಮಾಡಿದರು.
ಸಿಐಟಿಯು ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್,ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ್ ವಾಮಂಜೂರು,ಕೃಷ್ಣ ಇನ್ನಾ, ಮೂಲ್ಕಿ ವಲಯ ಅಧ್ಯಕ್ಷ ಶಶಿಧರ್ ಕೆರೆಕಾಡು, ಜಿಲ್ಲಾ ಸಮಿತಿ ಸದಸ್ಯ ತುಳಸಿ ಬೆಳ್ಮಣ್ಣು, ಪ್ರೇಮ ಶುಭ ಹಾರೈಸಿದರು.
100 ವಿದ್ಯಾರ್ಥಿಗಳಿಗೆ ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಕೋರ್ ಗ್ರೂಪ್ ಸದಸ್ಯ ಪೂರ್ಣೆಶ್, ರವಿಂದ್ರ, ವಿಕಾಶ್, ವಿನೋದ್, ವಿಮಲೇಶ್ ,ದಿವೇಶ್ ಮಂಜುಳಾ,ಕೃಷ್ಣ ಪೆರಾರ್,ಕಿರಣ್ ಕತ್ತಲ್‌ಸಾರ್, ನಿತೇಶ್ ರಜನೀಶ್, ಜಯ ಮಧ್ಯ, ಪದ್ಮನಾಭ್ ಉಪಸ್ಥಿತರಿದ್ದರು.
ಲೇಖನ್ ವಿ ಸ್ವಾಗತಿಸಿ, ವಿಘ್ನೇಶ್ ವಾಮಂಜೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುನೀತ್ ವಂದಿಸಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕಿ ರಶ್ಮಿ ಸಂತೋಷ್ ನಗರ ಕಾರ್ಯಕ್ರಮ ನಿರ್ವಹಿಸಿದರು.







