ದ.ಕ. ಜಿಲ್ಲೆಯ ಜನರಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆ ಯಾಚಿಸಲಿ: ಮಮತಾ ಗಟ್ಟಿ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪ್ರಾಕೃತಿಕ ವಿಕೋಪದಿಂದ ತುಂಬಾ ಹಾನಿಯಾಗಿದೆ. ಆದರೆ ಜಿಲ್ಲೆಯ ವರೇ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಇಲ್ಲಿಗೆ ಆಗಮಿಸಿ ಜನರ ಸಂಕಷ್ಟವನ್ನು ಬಗೆಹರಿಸಲು ಎಲ್ಲ ಅವಕಾಶ ಇದ್ದರೂ, ಅವರು ಅದರ ಬಗ್ಗೆ ಯೋಚಿಸಿದೆ ಸ್ಪೀಕರ್ ಯು.ಟಿ.ಖಾದರ್ ಮತ್ತು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಅವರು ದ.ಕ. ಜಿಲ್ಲೆಯ ಬಗ್ಗೆ ಲಘವಾಗಿ ಮಾತನಾಡಿ ಜಿಲ್ಲೆಯ ಜನರನ್ನು ಅವಮಾನ ಮಾಡಿರುವ ಕಾರಣ ಕೂಡಲೇ ಅವರು ಕ್ಷಮೆ ಯಾಚಿಸಲಿ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಉಳಿಸಿ, ಬೆಳೆಸಲು ಅವಕಾಶ, ಅಧಿಕಾರ ಎಲ್ಲವೂ ನಿಮ್ಮಲ್ಲಿದೆ. ಹೀಗಿದ್ದರೂ ನೀವು ಮಾತ್ರ ಆ ನಿಟ್ಟಿನಲ್ಲಿ ಚಿಂತಿಸದೆ, ಎಲ್ಲೂ ಕೂತುಕೊಂಡು ಪ್ರಚೋದನಕಾರಿ ಹೇಳಿಕೆ ಕೊಡುವ ಮೂಲಕ ಯುವಜನರನ್ನು ದಾರಿತಪ್ಪಿಸುವ ಪ್ರಯತ್ನ ಯಾಕೆ ಮಾಡುತ್ತಿದ್ದೀರಿ. ನಿಮ್ಮ ಘನತೆಗೆ ಇದು ಶೋಭೆ ತರುವಂತದದ್ದಲ್ಲ ಎಂದು ನುಡಿದರು.
ನಿಮಗೆ ದ.ಕ. ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ಒಮ್ಮೆ ಭೇಟಿ ನೀಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ, ಸೌಹಾರ್ದತೆಯನ್ನು ನೆಲೆಗೊಳಿಸಲು ಯಾಕೆ ಶ್ರಮಿಸಿಲ್ಲ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾದವರ ಬಗ್ಗೆ ಯಾಕೆ ಗಮನ ಹರಿಸಿಲ್ಲ ಎಂದು ಪ್ರಶ್ನಿಸಿದರು.
ಶೋಭಾ ಕರಂದ್ಲಾಜೆ ಹೇಳಿಕೆ ಬಾಲಿಶವಾಗಿದೆ. ಅವರು ಶಾಂತಿಪ್ರಿಯರ ಮನ ನೋಯಿಸಿದ್ದಾರೆ. ಜಿಲ್ಲೆ ಯಲ್ಲಿ ಅಶಾಂತಿಯ ವಾತಾವರಣ ಯಾರು ಕಾರಣ ಎಂಬ ವಿಚಾರ ಅವರಿಗೆ ಗೊತ್ತಿದ್ದರೂ ಉಸ್ತುವಾರಿ ಸಚಿವರ ಮೇಲೆ ಆರೋಪ ಮಾಡುತಿದ್ದಾರೆ ಎಂದು ಆರೋಪಿಸಿದರು.
ಮೊದಲು ನಿಮ್ಮ ಸ್ಥಿತಿ ಹೇಗಿತ್ತು ಎಂದು ಯೋಚಿಸಿ. ಉನ್ನತ ಸ್ಥಾನದಲ್ಲಿರುವ ತಮಗೆ ದ.ಕ. ಜಿಲ್ಲೆಯ ಬಗ್ಗೆ ಪ್ರೀತಿ ಇದ್ದರೆ ಕೋಮು ಶಕ್ತಿಗಳನ್ನು ನಿಗ್ರಹ ಮಾಡಲು ಯಾಕೆ ಯೋಚಿಸಿಲ್ಲ. ಬಡವರ ಮಕ್ಕಳನ್ನು ಯಾಕೆ ಕೆಟ್ಟ ಕೆಲಸಗಳಿಗೆ ತಳ್ಳುತ್ತೀರಿ ? ‘ ಕೇವಲ ಇನ್ನೊಬ್ಬರ ಮೇಲೆ ಆರೋಪಗಳನ್ನೇ ಮಾಡುತ್ತಿರುವ ನೀವು ಜಿಲ್ಲೆಯ ಅಭಿವೃದ್ಧಿಗೆ ಯಾವ ಕೊಡುಗೆ ನೀಡುವಿರಿ ಎಂದು ಪ್ರಶ್ನಿಸಿದರು.
‘ ಉದ್ರೇಕಾರಿ ಭಾಷಣ ಮಾಡಿದ್ದೇನೆ. ನನ್ನ ಮೇಲೆ ಕೇಸ್ ಹಾಕಿಲ್ಲ. ತಾಕತ್ತಿದ್ದರೆ ಕೇಸ್ ಹಾಕಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ. ಕೇಂದ್ರ ಸಚಿವರಾಗಿರುವ ಅವರು ಕಾನೂನು, ಸಂವಿಧಾನಕ್ಕೆ ಗೌರವ ಕೊಟ್ಟು ಮಾತನಾಡಲಿ’ ಎಂದರು.
ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರನ್ನು ನಾಲಾಯಕ್ ಸಚಿವ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿರುವುದು ಖಂಡನೀಯ . ಸಚಿವ ದಿನೇಶ್ ಗುಂಡೂ ರಾವ್ ತಾವು ಉಸ್ತುವಾರಿ ಸಚಿವ ರಾದ ಬಳಿಕ ತಮಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅವರ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಬಹಳಷ್ಟು ಅಭಿವೃದ್ಧಿಯಾಗಿದೆ. ಗಲಾಟೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದರು.
ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಬಗ್ಗೆಯೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅನಗತ್ಯ ಆರೋಪ ಮಾಡಿದ್ದಾರೆ.
ಪಂಚ ಗ್ಯಾರಂಟಿ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಯು ಪ್ರತಿಯೊಬ್ಬರ ಮನೆ ಮನವನ್ನು ಬೆಳಗುತ್ತಾ ಇದೆ. ಬೇಕಿದ್ದರೆ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹುಟ್ಟೂರು ಚಾರ್ವಾಕದಲ್ಲಿ ಸರ್ವೆ ಮಾಡಲಿ. ಆಗ ಅಲ್ಲಿ ಎಷ್ಟು ಜನರು ಅಲ್ಲಿ ಪ್ರಯೋಜನ ಪಡೆದಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ರೂಪಾ ಚೇತನ್, ಅಪ್ಪಿ ಉಪಸ್ಥಿತರಿದ್ದರು.