ಗೃಹ ಸಚಿವರ ನಿಂದಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು: ಬಂಟ್ವಾಳದಲ್ಲಿ ನಡೆದ ಹತ್ಯೆ ಪ್ರಕರಣವನ್ನು ಮುಂದಿಟ್ಟುಕ್ಕೊಂಡು ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ನಿಂದಿಸುವ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಗೃಹಸಚಿವರ ಬಗ್ಗೆ ನಿಂದನಾತ್ಮಕ ಆಡಿಯೋ ಸಂದೇಶ ಕಳುಹಿಸಿದವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಹೋರಾಟ ಸಮಿತಿ ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಮುಖಂಡ ಅನಿಲ್ ಕುಮಾರ್ ಕಂಕನಾಡಿ, ಉನ್ನತ ಮಟ್ಟದ ಹುದ್ದೆಯಲ್ಲಿರುವ ಗೃಹಸಚಿವರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಖಂಡನೀಯ. ಜೊತೆಗೆ ಅವರ ಕುಟುಂಬವನ್ನೂ ಹೀಗಳೆಯಲಾಗಿದೆ. ಗೃಹ ಸಚಿವರನ್ನು ನಿಂದನೆ ಮಾಡಿದಲ್ಲದೆ, ಅದನ್ನು ರೆಕಾರ್ಡ್ ಮಾಡಿ ವಾಟ್ಸಪ್ ಗ್ರೂಪ್‌ಗಳಿಗೆ ರವಾನಿಸಲಾಗಿದೆ. ಜಿಲ್ಲೆಯಾದ್ಯಂತ ಆಡಿಯೋ ವೈರಲ್ ಆಗಿದೆ. ಇದರಿಂದ ಸಮುದಾಯಕ್ಕೆ ತೀವ್ರ ನೋವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ್, ಮುಖಂಡರಾದ ವಿಷು ಕುಮಾರ್ ಮುಲ್ಕಿ, ಸಿದ್ದಪ್ಪ ಬಸವನಗರ, ದಶರಥ ದಡ್ಡಲ್‌ಕಾಡ್, ಪ್ರಸಾದ್ ಕಂಕನಾಡಿ, ಆರ್. ಜೆ. ಕರ್ಕೇರ ಉಪಸ್ಥಿತರಿದ್ದರು.