ಹೊಟೇಲ್ ಮಾಲಕ, ಇಬ್ಬರು ಸಹೋದರರಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು

ಉಳ್ಳಾಲ: ಫಾಸ್ಟ್ ಫುಡ್ ತಿಂದು ಬಿಲ್ ಕೊಡುವ ವಿಚಾರದಲ್ಲಿ ತಗಾದೆ ತೆಗೆದ ಮೂವರು ಕಿಡಿಗೇಡಿ ಯುವಕರು ಹೊಟೇಲ್ ಮಾಲಕ ಮತ್ತು ಆತನ ಸಹೋದರರಿಬ್ಬರಿಗೆ ಹಲ್ಲೆಗೈದು ಚೂರಿಯಿಂದ ಇರಿಯಲೆತ್ನಿಸಿದ ಘಟನೆ ಅಂಬಿಕಾರೋಡ್ ಗಟ್ಟಿ ಸಮಾಜದ ಬಳಿ ಇರುವ ಟಿಕ್ಕ ಪಾಯಿಂಟ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಟಿಕ್ಕ ಪಾಯಿಂಟ್ ಮಾಲಕ ಅಬ್ದುಲ್ ಆಸಿಫ್ ಮತ್ತು ಅವರ ಸಹೋದರ ಅಬ್ದುಲ್ ರಶೀದ್ ಹಲ್ಲೆಗೊಳಗಾಗಿದ್ದು, ಮತ್ತೋರ್ವ ಸಹೋದರ ಬಶೀರ್ ಅವರಿಗೆ ಕತ್ತಿಯಿಂದ ಇರಿಯಲ್ಪಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸಿಫ್ ಅವರು ಅಂಬಿಕಾರೋಡ್ ಗಟ್ಟಿ ಸಮಾಜದ ಎದುರಿನ ಹೆದ್ದಾರಿ ಅಂಚಿನಲ್ಲಿ ಸಹೋದರರಾದ ಅಬ್ದುಲ್ ರಶೀದ್ ಮತ್ತು ಬಶೀರ್ ಜೊತೆಗೂಡಿ ಟಿಕ್ಕ ಪಾಯಿಂಟ್ ಎಂಬ ಫಾಸ್ಟ್ ಫುಡ್ ವ್ಯವಹಾರ ನಡೆಸುತ್ತಿದ್ದರು. ಮಂಗಳವಾರ ರಾತ್ರಿ 10.30 ರ ವೇಳೆ ಫಾಸ್ಟ್ ಫುಡ್ ಅಂಗಡಿಗೆ ಆಸಿಫ್ ಅವರ ಪರಿಚಯಸ್ಥರೇ ಆಗಿರುವ ಮುಝಾಂಬಿಲ್, ನಿಸಾರ್ ಮತ್ತು ಸವಾದ್ ಎಂಬ ಮೂವರು ಯುವಕರು ಬಂದಿದ್ದರು. ಫಾಸ್ಟ್ ಫುಡ್ ಸೇವಿಸಿದ ಬಳಿಕ ಬಿಲ್ ಕೊಡೋ ವಿಚಾರದಲ್ಲಿ ಅಂಗಡಿ ಮಾಲಕ ಆಸಿಫ್ ಅವರಲ್ಲಿ ಈ ಮೂವರು ತಗಾದೆಯೆತ್ತಿ ಹಲ್ಲೆ ನಡೆಸಿದ್ದಾರೆ. ಮೊದಲಿಗೆ ಆಸಿಫ್ ಅವರ ಅಣ್ಣ ರಶೀದ್ ಅವರ ಮೇಲೆ ಹಲ್ಲೆ ನಡೆಸಿದ್ದು, ಗಲಾಟೆ ತಡೆಯಲು ಬಂದ ಸಹೋದರ ಬಶೀರ್ ಅವರ ಮೇಲೂ ಹಲ್ಲೆಗೈದ ಆರೋಪಿಗಳು ಚಾಕುವಿನಿಂದ ಹೊಟ್ಟೆಗೆ ಇರಿಯಲೆತ್ನಿಸಿದ್ದಾರೆ. ಇದರಿಂದ ಅವರ ಕಿವಿ, ಕೆನ್ನೆ, ಕೈ, ಕಾಲು ಮತ್ತು ಬೆನ್ನಿಗೆ ಕತ್ತಿಯಿಂದ ಇರಿದ ಗಾಯಗಳಾಗಿವೆ. ಈ ವೇಳೆ ಜನ ಜಮಾಯಿಸುತ್ತಿರುವುದನ್ನು ಗಮನಿಸಿದ ಆರೋಪಿಗಳು ಪರಾರಿಯಾಗಿದ್ದಾರೆಂದು ದೂರಲಾಗಿದೆ.
ಈ ಘಟನೆ ಯಿಂದ ಗಾಯಗೊಂಡ ಬಶೀರ್ ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಾಸ್ಟ್ ಫುಡ್ ಮಾಲಕ ಆಸಿಫ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.