ಚೇಳಾಯರು ಖಂಡಿಗೆ ನಂದಿನಿ ನದಿಗೆ ತ್ಯಾಜ್ಯ ನೀರು ಬಿಡುವ ಆರೋಪ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಸುರತ್ಕಲ್: ಇತಿಹಾಸ ಪ್ರಸಿದ್ಧ ಚೇಳಾಯರು ಖಂಡಿಗೆ ನಂದಿನಿ ನದಿಗೆ ಆಸ್ಪತ್ರೆ, ವಸತಿ ಗೃಹಗಳ ಕಲುಶಿತ ನೀರು, ಒಳಚರಂಡಿಯ ಕೊಳಚೆ ನೀರು, ಪರಿಸರದ ಮನೆಗಳ ತ್ಯಾಜ್ಯ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು.
ನಂದಿನಿ ನದಿ ಚೇಳಾಯರು ಖಂಡಿಗೆ ಭಾಗದ ಅನೇಕ ಕುಟುಂಬಗಳು ಕೃಷಿಯನ್ನೆ ಅವಲಂಬಿಸಿದ್ದು, ಕೃಷಿ ಮಾಡದ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲೀನ ಗೊಂಡಿವೆ. ಇತಿಹಾಸ ಪ್ರಸಿದ್ದ ಖಂಡಿಗೆ ದೈವಸ್ಥಾನದ ಸಾಂಪ್ರದಾಯಿಕ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ. ಜಾನುವಾರುಗಳಿಗೆ ನೀರು ಕುಡಿಯಲು ಮತ್ತು ಮೇವು ತಿನ್ನದ ಹೀನಾಯ ಪರಿಸ್ಥಿತಿ ಎದುರಾಗಿದ್ದು ಬಾವಿಯ ನೀರು ಕುಡಿದ ಅನೇಕ ಜನರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ಸಚಿವರ ಬಳಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಗ್ರಾಮಸ್ಥರು ಅಹವಾಲು ಹೇಳುತ್ತಿದ್ದಂತೆ ಮಾತನಾಡಿದ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರು, ಇಲ್ಲಿ ಶ್ರೀನಿವಾಸ್ ಆಸ್ಪತ್ರೆಯವರು ತಮ್ಮ ಕಲುಷಿತ ನೀರನ್ನು ನೇರವಾಗಿ ನಂದಿನಿ ನದಿಗೆ ಬಿಡುತ್ತಿದ್ದಾರೆ. ಎಸ್ಪಿಟಿಯ ನೀರೂ ಇದೇ ನದಿಗೆ ಹರಿಯ ಬಿಡಲಾಗುತ್ತಿದೆ. ಹಾಗಾಗಿ 800 ವರ್ಷಗಳ ಇತಿಹಾಸ ಇರುವ ಗ್ರಾಮದ ದೈವಸ್ಥಾನದ ಸಾಂಪ್ರದಾಯಿಕ ಮೀನು ಹಿಡಿಯುವ ಜಾತ್ರೆಯೂ ನಡೆಸದಂತಾಗಿದೆ. ಈ ಸಂಬಂಧ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅನೇಕ ಪ್ರತಿಭಟನೆ ಗಳನ್ನೂ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಂಆರ್ ಪಿಎಲ್ ಗೆ ಪ್ರತೀ ವರ್ಷವೂ ನೀರಿನ ಅಭಾವ ಎದುರಾಗುತ್ತಿರುತ್ತವೆ. ಹಾಗಾಗಿ ಕಲುಶಿತ ನೀರನ್ನು ಶುದ್ದೀಕರಿಸಿ ಅದಕ್ಕೆ ಬಳಸಿಕೊಳ್ಳಬಹುದು ಮತ್ತು ನದಿಗೆ ನೇರವಾಗಿ ಕಲುಷಿತ ತ್ಯಾಜ್ಯ ನೀರು ಹರಿಸುತ್ತಿರುವ ಮುಕ್ಕ ಶ್ರೀನಿವಾಸ್ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ವಹಿಸಿ ತ್ಯಾಜ್ಯ ನೀರನ್ನು ಅಲ್ಲೇ ಸಂಸ್ಕರಿಸಿಕೊಳ್ಳುವಂತೆ ಮಾಡಬೇಕೆಂದು ಮನವಿ ಮಾಡಿದರು.
ಎಲ್ಲಾ ಅಹವಾಲುಗಳನ್ನು ಆಲಿಸಿದ ಸಚಿವರು, ಸದ್ಯ ಇಲ್ಲಿನ ನೀರಿ ಶುದ್ದೀಕರಣ ಘಟಕದಲ್ಲಿ ಹಳೆಯ ಯಂತ್ರೋಪರಕಣಗಳಿದ್ದು, ಅದನ್ನು ಮೇಲ್ದರ್ಜೆಗೇರಿಸಿ ನೂತನ ಯಂತ್ರೋಪಕರಣಗಳನ್ನು ಅಳವಡಿಸುವ ಬಗ್ಗೆ ಚಿಂತಿಸಲಾಗುವುದು ಎಂದರು. ಕಲುಷಿತ ನೀರನ್ನು ನದಿಗೆ ಬಿಡುತ್ತಿರುವ ಶ್ರೀನಿವಾಸ್ ಆಸ್ಪತ್ರೆಯ ವಿರುದ್ಧ ಕ್ರಮವಹಿಸಲು ಸೂಚನೆ ನೀಡಿದರು. ಅಲ್ಲದೆ, ನಂದಿನಿ ನದಿ ಕಲುಷಿತ ಗೊಂಡಿರುವ ಸಮಸ್ಯೆ ಬಗ್ಗೆ ಈ ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂದಿಸಿದ ಎಲ್ಲಾ ಇಲಾಖೆಗಳು, ಎಂ ಆರ್ ಪಿಎಲ್ , ಪರಿಸರ ಇಲಾಖೆ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಅಪರ ಜಿಲ್ಲಾಧಿಕಾರಿ ಸಂತೋಷ್, ಮಂಗಳೂರು ಸಹಾಯಕ ಅಯುಕ್ತರಾದ ಹರ್ಷವರ್ದನ್, ಮಂಗಳೂರು ನಗರ ಪಾಲಿಕೆ ಅಯುಕ್ತರಾದ ರವಿಚಂದ್ರ ನಾಯಕ್, ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಮುಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಪ ತಹಶೀಲ್ದಾರ್ ನವೀನ್ ಕುಮಾರ್, ಸುರತ್ಕಲ್ ಕಂದಾಯ ಅಧಿಕಾರಿ ಪ್ರಸಾದ್, ವಕೀಲರಾದ ವಿನಯರಾಜ್, ಮೂಲ್ಕಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಕಿರಣ್ ಶೆಟ್ಟಿ ಕೆರೆಮನೆ ಚೇಳಾಯರು, ಚೇಳಾಯರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಡಿ, ಅಣ್ಣಪ್ಪ ಜಿ. ಕುಂದರ್, ಸದಸ್ಯರಾದ ಸುಧಾಕರ ಶೆಟ್ಟಿ, ಲತಾ,ಸುಮನಾ ಭಟ್, ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ವಸಂತ್ ಬೇರ್ನಾಡ್, ಅಬ್ದುಲ್ ರಝಾಕ್ ಸೂರಿಂಜೆ, ದಿನೇಶ್ ಪಂಡಿತ್, ಚೇಳೈರು ಗ್ರಾಮ ಅಡಳಿತ ಅಧಿಕಾರಿ ಸುಲೋಚನಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ನಿತ್ಯಾನಂದ, ನಂದಿನಿ ನದಿ ಸಂರಕ್ಷಣಾ ಸಮಿತಿಯ ಪ್ರಮುಖರಾದ ದಿವಾಕರ ಸಾಮಾನಿ, ಸುಕೇಶ್ ಶೆಟ್ಟಿ ಖಂಡಿಗೆ, ನಿತಿನ್ ಶೆಟ್ಟಿ ಖಂಡಿಗೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸೇವಾ ಪ್ರತಿನಿಧಿ ವಿದ್ಯಾ ಸ್ಥಳೀಯರಾದ ಗಂಗಾಧರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.