ಕೆಪಿಸಿಸಿ ನಿಯೋಗದಿಂದ ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳ ಭೇಟಿ

ಮಂಗಳೂರು, ಜೂ.5: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಸತ್ಯಾಸತ್ಯತೆಯನ್ನು ಅಧ್ಯಯನ ನಡೆಸಲು ಮಂಗಳೂರಿಗೆ ಭೇಟಿ ನೀಡಿರುವ ಕೆಪಿಸಿಸಿ ನಿಯೋಗವು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಿಂದ ನಿಯುಕ್ತಿಗೊಂಡಿರುವ ಏಳು ಮಂದಿಯ ತಂಡದ ನೇತೃತ್ವವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ನಾಸಿರ್ ಹುಸೇನ್ ವಹಿಸಿದ್ದಾರೆ.
ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹಾರಿಸ್, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕಿಮ್ಮನೆ ರತ್ನಾಕರ್ ನಿಯೋಗದಲ್ಲಿದ್ದಾರೆ.
ಗುರುವಾರ ಬೆಳಗ್ಗೆ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ಪಕ್ಷದ ಹಿರಿಯ ನಾಯಕರು, ಚುನಾಯಿತ ಪ್ರತಿನಿಧಿಗಳನ್ನು ಭೇಟಿಯಾಗಿ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಕೋಮು ದ್ವೇಷದ ಪ್ರಕರಣಗಳು, ಹತ್ಯೆಗಳಿಂದ ಜಿಲ್ಲೆಯಲ್ಲಿ ಸೌಹಾರ್ದಕ್ಕೆ ಭಂಗ ಉಂಟಾಗಿರುವ ಬಗ್ಗೆ, ಕೋಮು ದ್ವೇಷದ ಪ್ರಚೋದನಕಾರಿ ಭಾಷಣ, ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗದಿರುವ ಕುರಿತಂತೆ ಸ್ಥಳೀಯ ನಾಯಕರು ನಿಯೋಗದ ಗಮನಕ್ಕೆ ತಂದಿದ್ದಾರೆ. ಕರಾವಳಿಯಲ್ಲಿ ಕೋಮು ಸಾಮರಸ್ಯಕ್ಕೆ ಹಾನಿ ಮಾಡುವ ಪ್ರಕರಣಗಳಿಗೆ ಸಂಬಂಧಿಸಿ ಕೆಲ ಕಾನೂನುನಲ್ಲೂ ರಾಜ್ಯ ಮಟ್ಟದಲ್ಲಿ ಬದಲಾವಣೆ, ತಿದ್ದುಪಡಿಗೆ ಸಂಬಂಧಿಸಿ ಸಲಹೆ, ಸೂಚನೆಗಳನ್ನು ನೀಡಿದ್ದಾರೆನ್ನಲಾಗಿದೆ.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ನಿಯೋಗವು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಹಾಗೂ ಇತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ನಿಯೋಗವು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ಅಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿತು.
ನಿಯೋಗವು ಜಿಲ್ಲೆಯ ವಿವಿಧ ಧಾರ್ಮಿಕ ಮುಖಂಡರು, ಹಿರಿಯ ನಾಯಕರನ್ನು ಭೇಟಿಯಾಗಿ ಅವರ ಜತೆಯೂ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ.







