ಮಂಗಳೂರು ಸರಕಾರಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವರಿಗೆ ಮನವಿ

ಮಂಗಳೂರು, ಜೂ.5: ನಗರದ ಸರಕಾರಿ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿಯವರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಮಂಗಳೂರು ಬಸ್ ನಿಲ್ದಾಣವನ್ನು ಇತರ ಜಿಲ್ಲೆಯಲ್ಲಿರುವಂತೆ ಅಗತ್ಯ ಆಧುನಿಕ ಸೌಲಭ್ಯಗಳೊಂದಿಗೆ ಹೈಟೆಕ್ ಆಗಿ ಪರಿವರ್ತಿಸುವ ಜತೆಗೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಆರಂಭಿಸಬೇಕು ಎಂದು ಅವರು ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮಂಗಳೂರು ನಗರವು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿದ್ದು, ಅಭಿವೃದ್ಧಿಗೆ ಪೂರಕವಾದ ವಾಣಿಜ್ಯ ಚಟುವಟಿಗಳಿಂದಾಗಿ ಕರ್ನಾಟಕದ ಬಂದರು ನಗರಿಯಾಗಿ ಹಾಗೂ ಪ್ರಮುಖ ರೇವು ಪಟ್ಟಣವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ದೇಶ-ವಿದೇಶಗಳಿಂದಲೂ ಸಾವಿರಾರು ಜನ ಪ್ರತಿನಿತ್ಯ ನಗರಕ್ಕೆ ಭೇಟಿ ನೀಡುತ್ತಾರೆ.
ಮಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣವು 1980ರಲ್ಲಿ ಮಂಜೂರಾಗಿ 1986ರಲ್ಲಿ ಅಂದಾಜು 60 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುತ್ತದೆ.
ಪ್ರಸ್ತುತ ಬಸ್ ನಿಲ್ದಾಣವು 03 ಎಕರೆ 60 ಸೆಂಟ್ಸ್ ವಿಸ್ತೀರ್ಣದ ಪ್ರದೇಶವನ್ನು ಹೊಂದಿದ್ದು, 4702.94 ಚ. ಮೀ ವಿಸ್ತೀರ್ಣದ ನಿಲ್ದಾಣಕಟ್ಟಡ, 814.82 ಚ. ಮೀ ವಾಣಿಜ್ಯ ಪ್ರದೇಶ, 305.00 ಚ. ಮೀ ದ್ವಿಚಕ್ರ ವಾಹನ ಪಾರ್ಕಿಂಗ್, 608.50 ಚ. ಮೀ ಕಾರ್ ಪಾರ್ಕಿಂಗ್, 171.92 ಚ. ಮೀ ರಿಕ್ಷಾ ನಿಲ್ದಾಣ, 1564.82 ಚ.ಮೀ ವಿಶ್ರಾಂತಿ ಕೊಠಡಿಗಳ ಸಾಮರ್ಥ್ಯವನ್ನು ಹೊಂದಿದೆ.
ಕಳೆದ 39 ವರ್ಷಗಳಲ್ಲಿ ಅಲ್ಪಸ್ವಲ್ಪ ಅನುದಾನದಿಂದ ನಿಲ್ದಾಣವನ್ನು ನಿರ್ವಹಣೆ ಮಾಡಲಾಗಿದೆಯೇ ಹೊರತು ಆಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸುವ ಯಾವುದೇ ಪ್ರಯತ್ನಗಳಾಗಿರುವುದಿಲ್ಲ.
ನಿಲ್ದಾಣಕ್ಕೆ ಪ್ರತಿನಿತ್ಯ ವಿವಿಧ ವಿಭಾಗಗಳಿಂದ ಅಂದಾಜು 585 ಬಸ್‌ಗಳು ಬಂದು ಹೋಗುತ್ತಿದ್ದು, ಸರಿಸುಮಾರು 25,000 ಪ್ರಯಾಣಿಕರು ನಿತ್ಯ ನಿಲ್ದಾಣವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ವಿವಿಧ ಉದ್ಯಮಗಳ ಮೂಲಕ ಅತೀಹೆಚ್ಚು ತೆರಿಗೆ ಪಾವತಿಸುವ ಜನರು ಹಾಗೂ ಸಂಸ್ಥೆಗಳನ್ನು ಹೊಂದಿರುವ ನಗರಗಳಲ್ಲಿ ಒಂದಾಗಿರುವ ಮಂಗಳೂರಿನಲ್ಲಿ, ಕಾಲಮಾನಕ್ಕೆ ತಕ್ಕಂತೆ ನಿಲ್ದಾಣದ ಸಾಮರ್ಥ್ಯವನ್ನು ಮೇಲ್ದರ್ಜೆಗೆರಿಸಿ, ಇತರೇ ರಾಜ್ಯದಲ್ಲಿರುವಂತೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕೆಂಬುದು ಮಂಗಳೂರಿನ ನಿವಾಸಿ ಗಳ ಹಾಗು ಪಕ್ಷದ ಮುಖಂಡರ ಆಗ್ರಹವಾಗಿದೆ ಎಂಬುದಾಗಿ ಮಂಜುನಾಥ ಭಂಡಾರಿಯವರು ಮನವಿಯಲ್ಲಿ ಸಚಿವರಿಗೆ ವಿವರ ನೀಡಿದ್ದಾರೆ.