ಅಮಾಯಕರನ್ನು ಸಾಯಿಸಲು ಇದು ಮಣಿಪುರ ಅಥವಾ ಉತ್ತರ ಪ್ರದೇಶವಲ್ಲ : ಬಿ ಕೆ ಹರಿಪ್ರಸಾದ್

ಬಿ ಕೆ ಹರಿಪ್ರಸಾದ್
ಮಂಗಳೂರು: ಕರ್ನಾಟಕ ರಾಜ್ಯದ ಎಲ್ಲಡೆ ಶಾಂತಿ ನೆಲೆಸಿರುವಾಗ ಕರಾವಳಿಯಲ್ಲಿ ಅದರಲ್ಲೂ ದ.ಕ. ಜಿಲ್ಲೆಯಲ್ಲಿ ಯಾಕೆ ಇಷ್ಟೆಲ್ಲಾ ಅನಾಹುತವಾಗುತ್ತದೆ ಎಂಬ ವಿಚಾರದ ಬಗ್ಗೆ ಕೂಲಂಕಷವಾಗಿ ನೋಡಬೇಕಾಗುತ್ತದೆ. ಅಮಾಯಕರನ್ನು ಹೋಗಿ ಸಾಯಿಸಲು ಇದು ಮಣಿಪುರ ಅಥವಾ ಉತ್ತರ ಪ್ರದೇಶವಲ್ಲ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರು ನಮ್ಮೂರು. ಅದಕ್ಕೆ ಬಂದಿದ್ದೀನಿ. ಮೀಟಿಂಗ್ ಏನು ಇಲ್ಲ. ಜಿಲ್ಲೆಗೆ ಆಗಾಗ ಭೇಟಿ ನೀಡುತ್ತಿದ್ದೇನೆ. ಇಲ್ಲಿ ನಡೆಯಬಾರದ ಘಟನೆಗಳು ನಡೆದಿದೆ. ಅದನ್ನು ಕೇಳಿಕೊಂಡು ಹೋಗುವ ಎಂದು ಬಂದಿದ್ದೇನೆ. ಮುಖ್ಯಮಂತ್ರಿ ಇತ್ತೀಚೆಗೆ ತಮ್ಮ ಮನೆಗೆ ಭೇಟಿ ನೀಡಿದಾಗ ದ.ಕ. ಜಿಲ್ಲೆಯನ್ನು ಇನ್ನೊಂದು ಮಣಿಪುರವಾಗಿ ಮಾಡಲು ಅವಕಾಶ ನೀಡಬೇಡಿ ಎಂದು ಹೇಳಿರುವುದಾಗಿ ತಿಳಿಸಿದರು.
ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ಸರಕಾರ ನಮ್ಮೊಂದಿಗೆ ಇರುವಾಗ ಯಾರೂ ಭಯ ಪಡಬೇಕಾ ಗಿಲ್ಲ. ಸೈದ್ಧಾಂತಿವಾಗಿ ದೃಢವಾಗಿರುವವರು ಭಾವನಾತ್ಮವಾಗಿ ಮನಸ್ಸಿಗೆ ನೋವಾದಾಗ ರಾಜೀನಾಮೆ ನೀಡುವುದು ಸಹಜ. ಈಗಾಗಲೇ ಜಿಲ್ಲೆಯಲ್ಲಿ ಕಾಂಗ್ರೆಸ್ನ ಕೆಲವು ನಾಯಕರು ನೀಡಿರುವ ರಾಜೀನಾಮೆ ಯನ್ನು ವಾಪಸ್ ಪಡೆಯಲು ಮನವಿ ಮಾಡುವುದಾಗಿ ಹೇಳಿದರು.
ದ.ಕ. ಜಿಲ್ಲೆಗೆ ಒಳ್ಳೆಯ ಹೆಸರಿದೆ. ಸೂತ್ರಧಾರಿಗಳ ಕೈಗೊಂಬೆಗಳಾಗಿ ಪಾತ್ರಧಾರಿಗಳು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ, ಜೈಲಿಗೆ ಹೋಗುತ್ತಿದ್ದಾರೆ. ಸ್ವಲ್ಪ ದಿನಗಳಲ್ಲಿ ಸೂತ್ರಧಾರಿಗಳು ಯಾರೂ ಅಂತ ಗೊತ್ತಾಗುತ್ತದೆ ಎಂದು ಹೇಳಿದರು.
ಮಂಗಳೂರಿನ ಸ್ಥಿತಿಗತಿಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.







