ಸುಳ್ಯದಲ್ಲಿ ಮಟ್ಕಾ ದಂಧೆ: ಪೊಲೀಸರಿಂದ ದಾಳಿ

ಸಾಂದರ್ಭಿಕ ಚಿತ್ರ
ಸುಳ್ಯ: ಮಟ್ಕಾ ದಂಧೆ ನಡೆಯುತ್ತಿರುವ ಆರೋಪದಲ್ಲಿ ಸುಳ್ಯ ಠಾಣಾ ತನಿಖಾ ಎಸೈ ಸರಸ್ವತಿ ನೇತೃತ್ವದ ತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕಾಂಪ್ಲೆಕ್ಸ್ ಸಮೀಪ ಹಣವನ್ನು ಪಣಕ್ಕಿಟ್ಟು ಓ.ಸಿ. (ಮಟ್ಕಾ) ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತನಿಖಾ ಎಸೈ ಸರಸ್ವತಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದ್ದು, ಈ ವೇಳೆ ಸಾರ್ವಜನಿಕರಿಂದ ಹಣ ಪಡೆದು ಚೀಟಿ ಬರೆದುಕೊಡುತ್ತಿರುವುದು ಪತ್ತೆಯಾಗಿದ್ದು, ಅಲ್ಲಿದ್ದ ನಿತಿನ್ ಆಲೆಟ್ಟಿ (36) ಎಂಬಾತನಲ್ಲಿ ವಿಚಾರಿಸಿದ ಪೊಲೀಸರು, ತಾನು ಹಣವನ್ನು ಪಣವಾಗಿ ಪಡೆದು ಮಟ್ಕಾ ಚೀಟಿ ಬರೆದು ಕೊಡುತ್ತಿದ್ದು, ಸಂಜೆ ಸಂಗ್ರಹಿಸಿದ ಹಣವನ್ನು ಪುತ್ತೂರಿನ ಫೈನಾನ್ಸ್ ನಡೆಸುತ್ತಿರುವ ಶರತ್ ಆಳ್ವ ಎಂಬವರಿಗೆ ಬರೆದು ಚೀಟಿ ಸಮೇತ ನೀಡುತ್ತಿರುವುದಾಗಿಯೂ, ಮಟ್ಕಾ ದಂಧೆ ನಡೆಸಿ ಉಳಿದ ಹಣವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳುತ್ತಿರುವುದಾಗಿ ಒಪ್ಪಕೊಂಡಿದ್ದಾರೆ. ಆರೋಪಿಗಳು ವ್ಯವಸ್ಥಿತವಾಗಿ ಸಂಘಟಿತರಾಗಿ ಮಟ್ಕಾ ಜುಗಾರಿ ಆಡಿಸುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





