ಬೆಂಗಳೂರು ಕಮಿಷನರ್ ಅಮಾನತು ಪ್ರಕರಣ| ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಮಾತನಾಡುವುದಿಲ್ಲ: ಬಿ.ಕೆ. ಹರಿಪ್ರಸಾದ್

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಲ್ತುಳಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಪೊಲೀಸ್ ಕಮಿಷನರ್ ದಯಾನಂದ್ ಒಬ್ಬ ಬಹಳ ಪ್ರಾಮಾಣಿಕ ಮತ್ತು ಸ್ವಚ್ಛ ಕಮಿಷನರ್. ಭ್ರಷ್ಟಾಚಾರವನ್ನು ಮಟ್ಟಹಾಕಿದ ಅಧಿಕಾರಿ. ಅವರು ಬೆಂಗಳೂರಿನ ಘಟನೆಯಲ್ಲಿ ಏನಾಗಿತ್ತು ತಿಳಿದಿಲ್ಲ. ಹಾಗಾಗಿ ಕ್ಯಾಬಿನೆಟ್ ನಿರ್ಧಾರವಾದ ಕಾರಣ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾಡಿದ ಕಾರ್ಯಕ್ರಮ ಅದು. ಈ ಘಟನೆ ಆಗಬಾರದಾಗಿತ್ತು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ. ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.
ದ.ಕ. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಕುರಿತಂತೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ಜಿಲ್ಲೆಯ ಸಮಾನ ಮನಸ್ಕರ ಜೊತೆ ಮಾತನಾಡಿದ್ದೇನೆ. ನಾವೆಲ್ಲರೂ ಸೇರಿ ಜಿಲ್ಲೆಯಲ್ಲಿ ಸೌಹಾರ್ದತೆ ನಿರ್ಮಾಣದ ಪ್ರಯತ್ನ ಮಾಡುತ್ತೇವೆ. ದ.ಕ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಒಟ್ಟಾಗಿ ಪ್ರಯತ್ನಿಸುತ್ತೇವೆ. ವೈದ್ಯರು, ಬರಹಗಾರರು, ಚಿಂತಕರ ಜೊತೆ ಮಾತನಾಡಿದ್ದೇನೆ. ಮುಂದಿನ ಹೆಜ್ಜೆಗಳು ಏನು ಎಂಬ ಬಗ್ಗೆ ಬಹಳ ಚರ್ಚೆ ಆಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಕೋಮು ಧ್ರುವೀಕರಣದಿಂದ ಘಟನೆಗಳು ನಡೆಯುತ್ತಿವೆ. ಇಲ್ಲಿ ನಡೆದ ಘಟನೆಗಳು ವೈಯಕ್ತಿಕ ದ್ವೇಷದಿಂದ ಅಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಕೆಪಿಸಿಸಿ ನಿಯೋಗ ಅವರದ್ದೇ ಮಾಹಿತಿ ಪಡೆದು ಹೇಳಿಕೆ ಕೊಟ್ಟಿರಬಹುದು. ಅದಕ್ಕೂ ನನಗೂ ಸಂಬಂಧ ಇಲ್ಲ. ನನ್ನ ಮಾಹಿತಿ
ಮುಖ್ಯಮಂತ್ರಿಗೆ ಕೊಡುತ್ತೇನೆ. ಕಾನೂನು ಎಲ್ಲರಿಗೂ ಸಮಾನ, ಅದರಲ್ಲಿ ಧರ್ಮ ಜಾತಿ ಅಂತ ಯಾವುದೂ ಬರುವುದಿಲ್ಲ. ಹಾಗಾಗಿ ಗಡೀಪಾರು ವಿಚಾರದಲ್ಲೂ ಯಾವುದೇ ಜಾತಿ ಧರ್ಮ ಬರುವುದಿಲ್ಲ. ನಾನು ಪರಿಷತ್ ಸದಸ್ಯನಾಗಿ ಸಿಎಂ ಜೊತೆ ಮಾತನಾಡಿ ಇಲ್ಲಿಗೆ ಬಂದಿದ್ದೇನೆ. ಯಾವುದೇ ಧರ್ಮ, ಜಾತಿಯವರಾದರೂ ದ್ವೇಷ ಭಾಷಣ ಸರಿಯಲ್ಲ. ಸುಪ್ರೀಂ ಕೋರ್ಟ್ ಕೂಡ ದ್ವೇಷ ಭಾಷಣ ಮಾಡುವವರ ಮೇಲೆ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಲು ಹೇಳಿದೆ. ಕಾರ್ಯಾಂಗ ಮತ್ತು ನ್ಯಾಯಾಂಗ ಸಹಕಾರ ಇರಲಿಲ್ಲ ಅಂದರೆ ರಾಜ್ಯದಲ್ಲಿ ಶಾಂತಿ ನೆಲೆಸುವುದು ಕಷ್ಟ. ಇಂತಹ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡಿಸಬೇಕು. ಕೆಲವು ಸಂದರ್ಭಗಳಲ್ಲಿ ಯಾವುದೋ ಒತ್ತಡಕ್ಕೆ ಬಿದ್ದು ಹಾಗಾಗುತ್ತದೆ. ಅದು ಆಗಬಾರದು ಎಂದು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ದ್ವೇಷ ಭಾಷಣ ಮಾಡುವವರಿಗೆ ಜಾಮೀನು ಸಿಕ್ಕಿದರೆ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಅವರು ಹೇಳಿದರು.







