ರಾಷ್ಟ್ರ, ಅಂತಾರಾಷ್ಟ್ರೀಯ ಈಜು ಪಟುಗಳಿಗೆ ಪ್ರವೇಶ ಉಚಿತ; ತರಬೇತಿಗೆ ಮಾತ್ರವೇ ಶುಲ್ಕ: ಎಮ್ಮೆಕೆರೆ ಈಜುಕೊಳ ನಿರ್ದೇಶಕ

ಮಂಗಳೂರು: ಎಮ್ಮೆಕೆರೆ ಈಜುಕೊಳದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಈಜು ಪಟುಗಳಿಗೆ ಪ್ರವೇಶ ಉಚಿತವಾಗಿಯೇ ನೀಡಲಾಗುತ್ತದೆ. ಈಜುಕೊಳದಲ್ಲಿ ಉತ್ತಮ ಗುಣಮಟ್ಟದ ತರಬೇತಿಗಾಗಿ ಎನ್.ಐ.ಎಸ್. ಶಿಕ್ಷಣ ಹೊಂದಿರುವ ವಿಶ್ವಾಮಿತ್ರ ಪ್ರಶಸ್ತಿ ಪಡೆದ ತರಬೇತುದಾರರನ್ನು ನೇಮಕ ಮಾಡಲಾಗಿದ್ದು, ಆ ಹಿನ್ನೆಲೆಯಲ್ಲಿ ತರಬೇತಿಗೆ ಮಾತ್ರ ಈ ಈಜುಪಟುಗಳಿಂದ ಶುಲ್ಕ ಪಡೆಯಲಾಗುತ್ತದೆ ಎಂದು ಎಮ್ಮೆಕೆರೆ ಈಜುಕೊಳದ ನಿರ್ದೇಶಕ ನವೀನ್ ಪ್ರತಿಕ್ರಿಯಿಸಿದ್ದಾರೆ.
ಎಮ್ಮೆಕೆರೆ ಈಜುಕೊಳದ ಕುರಿತಂತೆ ದ.ಕ. ಈಜು ಸಂಸ್ಥೆಯು ಮಾಡಿರುವ ಆರೋಪಕ್ಕೆ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
ಈಜುಕೊಳದಲ್ಲಿ ಸಾರ್ವಜನಿಕರಿಗೆ, ಮಕ್ಕಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರವೇಶಕ್ಕೆ ಅವಕಾಶವಿದೆ. ಒಟ್ಟು 80 ಮಂದಿ ಈಜುಪಟುಗಳು ಎಮ್ಮೆಕೆರೆಯಲ್ಲಿ ಸದ್ಯ ತರಬೇತು ಪಡೆಯುತ್ತಿದ್ದಾರೆ. ಈಜು ಗೊತ್ತಿಲ್ಲದ ವರಿಗೆ ಈಜು ಕಲಿಸಲು ಹಾಗೂ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಲೆವೆಲ್ 1ರಿಂದ ಲೆವೆಲ್ 7ರವರೆಗೆ ತರಬೇತಿ ನೀಡುವ ಎನ್‌ಐಎಸ್ ತರಬೇತುದಾರರನ್ನು ನಿಯೋಜಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳ ನಿರ್ವಹಣೆಗಾಗಿ ಮುಚ್ಚಲ್ಪಟ್ಟಾಗ ಮಂಗಳ ಸ್ವಿಮ್ಮಿಂಗ್ ಕ್ಲಬ್ ಹಾಗೂ ಜೈಹಿಂದ್ ಕ್ಲಬ್‌ಗೆ ತರಬೇತಿ ನೀಡಲು ತಾತ್ಕಾಲಿಕವಾಗಿ ಅವಕಾಶ ನೀಡಲಾಗಿತ್ತು. ಮತ್ತೆ ಮನಪಾ ಈಜುಕೊಳ ಆರಂಭಗೊಂಡಾಗ ಜೈಹಿದ್ ಕ್ಲಬ್‌ನವರು ಅಲ್ಲಿಗೆ ತೆರಳಿದ್ದರು. ಮಂಗಳ ಸ್ವಿಮ್ಮಿಂಗ್ ಕ್ಲಬ್‌ನವರು ಇಲ್ಲಿಯೇ ಅವಕಾಶ ವಿನಂತಿಸಿದ್ದರು. ಅದಕ್ಕೆ ಸಂಜೆ 6.30ರಿಂದ 8ರವರೆಗೆ ಅವಕಾಶ ನೀಡ ಲಾಗಿದೆ. ಸಮಯ ಮೀರಿ ತರಬೇತಿ ನೀಡುತ್ತಿದ್ದರೂ ಆಕ್ಷೇಪಿಸಿಲ್ಲ. ಆದರೆ ತರಬೇತಿಗೆ ನಾವು ನಿಯೋಜಿಸಿರುವ ಎನ್‌ಐಎಸ್ ತರಬೇತುದಾರರು ತಾಂತ್ರಿಕ ಕಾರಣದಿಂದ ಸಮಯ ಬದಲಾವಣೆಗೆ ಒಪ್ಪದಾಗ ಅವರು ಮತ್ತೆ ಮನಪಾ ಈಜುಕೊಳಕ್ಕೆ ಹೋಗುತ್ತೇವೆ ಎಂದಿದ್ದರು. ಬಳಿಕ ದ.ಕ. ಸ್ವಿಮ್ಮಿಂಗ್ ಅಸೋಶಿಯಶನ್ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಮ್ಮ ಮಕ್ಕಳಿಗೆ ಉಚಿತ ಪ್ರವೇಶ ಹಾಗೂ ತರಬೇತುದಾರರಿಗೆ ತರಬೇತು ನೀಡಲು ಅವಕಾಶ ನೀಡುವಂತೆ ಒತ್ತಡ ಹಾಕಿದ್ದಾರೆ. ಅವರಿಗೆ ಪ್ರವೇಶ ಶುಲ್ಕವಾಗಿ 1000 ರೂ. ಪಡೆಯಲಾಗತ್ತಿತ್ತು. ಆದರೆ ಅವರು 3 ಸಾವಿರದಿಂದ 4 ಸಾವಿರ ರೂ.ವರೆಗೆ ಪಡೆದಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ ಮಂಗಳ ಸ್ವಿಮ್ಮಿಂಗ್ ಕ್ಲಬ್‌ನವರು ತಮ್ಮ ಮಕ್ಕಳಿಗೆ ಎಮ್ಮೆಕೆರೆ ಈಜುಕೊಳದಲ್ಲಿ ತರಬೇತಿಗೆ ಈಜುಪಟುಗಳಿಂದ 3 ಸಾವಿರದಿಂದ ನಾಲ್ಕು ಸಾವಿರ ರೂ. ಪಡೆಯುತ್ತಾರೆ ಎಂಬುದ್ನನು ಪೋಷಕರು ಹೇಳಿಕೊಂಡಿದ್ದರು. ಎಮ್ಮೆಕೆರೆ ಈಜು ಸಂಸ್ಥೆ ನಿರ್ವಹಣೆಗೆ ವಾರ್ಷಿಕ 11 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಸದ್ಯ 4 ಲಕ್ಷ ರೂ. ಶುಲ್ಕದಿಂದ ಬರುತ್ತಿದೆ. ಉಳಿದ್ದನ್ನು ಸ್ವಂತ ಹಣದಿಂದ ನಿಭಾಯಿಸುತ್ತಿದ್ದೇನೆ ಎಂದವರು ಹೇಳಿದರು.
ಸುರಕ್ಷತೆಯ ದೃಷ್ಟಿಯಿಂದ ಸ್ಮಾರ್ಟ್ ಸಿಟಿಯವರ ಗಮನಕ್ಕೆ ತಂದು ಅಭ್ಯಾಸಕೊಳದ ಆಳವನ್ನು ಕಡಿಮೆ ಮಾಡಲು ಸ್ಟೀಲ್‌ನಿಂದ ಮಾಡಿದ ಟ್ರೋಲಿ ಅಳವಡಿಸಲಾಗಿದೆ. ಇದರಿಂದ ಈಜುಕೊಳದ ವಿನ್ಯಾಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಇದು ಚಲಿಸುವ ಮತ್ತು ತೆಗೆಯಬಹುದಾದ ಟ್ರಾಲಿ. ಚಿಂತನ್ ಎಂಬ ಈಜುಪಟುವನ್ನು ನಾವು ಹೊರಹಾಕಿಲ್ಲ. ಬದಲಾಗಿ ಆತ ಬೆಂಗಳೂರಿನ ಲಕ್ಷನ್ ಈಜು ಸಂಸ್ಥೆಗೆ ಉನ್ನತ ನಿರ್ವಹಣೆಗಾಗಿ ಸೇರಿಕೊಂಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ 38 ಈಜುಪಟುಗಳನ್ನು ಹೊರ ಹಾಕಿದ್ದೇವೆ ಎಂಬ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗಿದೆ. ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ 14, ಜೈಹಿಂದ್‌ನ 11 ಹಾಗೂ ಪತ್ತುೂರು ಅಕ್ವಾಟಿಕ್‌ಕ್ಲಬ್‌ನ 11 ಮಂದಿ ಹಾಗೂ ಉಳಿದ ವಿ ವನ್ ಅಕ್ವಾ ಸೆಂಟರ್ ಮಕ್ಕಳ ಹೆಸರು ನೀಡಿದ್ದಾರೆ. ಆದರೆ ಎಮ್ಮೆಕೆರೆಈಜುಕೊಳ್ಳಕ್ಕೆ ಈ ಹೆಸರಿನಲ್ಲಿ ಕೇವಲ 14 ಮಕ್ಕಳು ಮಾತ್ರ ಬರುತ್ತಿದ್ದು, ಅವರಲ್ಲಿ ಕೇವಲ 9 ಮಕ್ಕಳು ಮಾತ್ರ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದವರು ಎಂದವರು ಹೇಳಿದರು.
ಗೋಷ್ಟಿಯಲ್ಲಿ ವಿವಿಧ ಸ್ವಿಮ್ಮಿಂಗ್ ಕ್ಲಬ್‌ಗಳ ಪ್ರಮುಖರಾದ ರಾಮಕೃಷ್ಣ, ಡಾ. ನಾಗೇಂದ್ರ, ಲೋಕರಾಜ್ ವಿಟ್ಲ, ರೂಪಾ ಜಿ. ಪ್ರಭು, ಇವಾ ಉಪಸ್ಥಿತರಿದ್ದರು.