ಕಣಚೂರು ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣ: ಆರೋಪಿ ಮೋನಿಕಾ ಚೌಧರಿ ಸೆರೆ
ಸೆಮಿನಾರ್ ತಪ್ಪಿಸಲು ವಿದ್ಯಾರ್ಥಿನಿಯಿಂದಲೇ ಕೃತ್ಯ

ಕೊಣಾಜೆ: ದೇರಳಕಟ್ಟೆ ಸಮೀಪದ ನಾಟೆಕಲ್ ಕಣಚೂರು ಮೆಡಿಕಲ್ ಕಾಲೇಜಿಗೆ ಫೋನ್ ಕರೆ ಮಾಡಿ ಬಾಂಬ್ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಿ.ಜಿ.ವಿದ್ಯಾರ್ಥಿನಿ ಮೋನಿಕಾ ಚೌಧರಿ ಎಂಬಾಕೆಯನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿ ದೂರು ನೀಡಿದ್ದವರೇ ಆರೋಪಿಯಾಗಿದ್ದು ಪ್ರಕರಣವು ಕುತೂಹಲಕ್ಕೆ ಕಾರಣವಾಗಿತ್ತು. ಜೂ.4ರಂದು ಬೆಳಗ್ಗೆ ಕಣಚೂರು ಮೆಡಿಕಲ್ ಕಾಲೇಜಿಗೆ ಅನಾಮೇದೆಯ ವ್ಯಕ್ತಿಯೊಬ್ಬರು ಕರೆ ಮಾಡಿ ಕಾಲೇಜಿಗೆ ಬಾಂಬ್ ಇಡಲಾಗಿದ್ದು ಹನ್ನೊಂದು ಗಂಟೆಗೆ ಬಾಂಬ್ ಬ್ಲಾಸ್ಟ್ ಆಗಲಿದೆ ಎಂದು ಹೇಳಿದ್ದರು. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮೊದಲಾದವರು ಬಂದು ತನಿಖೆ ನಡೆಸಿದ್ದರು. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ದೃಢಪಡಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪಿ.ಜಿ.ವಿದ್ಯಾರ್ಥಿನಿ ಚಲಸಾನಿ ಮೋನಿಕಾ ಚೌಧರಿ ಎಂಬಾಕೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತಂಡ ರಚಿಸಿ ತನಿಖೆ ನಡೆಸಿ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ ದೂರು ನೀಡಿದಾಕೆಯೇ ಆರೋಪಿ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶನಿವಾರ ಪೊಲೀಸರು ಆರೋಪಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ.
ಸೆಮಿನಾರ್ ತಪ್ಪಿಸಲು ಕೃತ್ಯ: ಪಿ.ಜಿ. ವಿದ್ಯಾರ್ಥಿನಿಯಾಗಿದ್ದ ಮೋನಿಕಾ ಚೌಧರಿಗೆ ಅದೇ ದಿನ ಸೆಮಿನಾರ್ ಇದ್ದು ಅದನ್ನು ತಪ್ಪಿಸಲು ಬೇಕಾಗಿ ಈ ಕೃತ್ಯ ನಡೆಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







